ತುಮಕೂರು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಗಳ ಮೌಲ್ಯ ಪರಿವೀಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರನ್ನೂ ಒಳಗೊಂಡಂತೆ ತನಿಖಾ ತಂಡ ರಚಿಸುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತುಮಕೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರ ಕನಸಿನ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಕ್ಕೆ 7 ಸಾವಿರ ಕೋಟಿ ರೂ. ಹಣ ವಿನಿಯೋಗ ಮಾಡಲಾಗಿದ್ದು, ಜಿಲ್ಲೆಗೆ 2229 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಜಲಜೀವನ್ ಮಿಷನ್ ಯೋಜನೆಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಮೀನುಗಾರಿಕೆ ಸಹಕಾರಿ ಸಂಘಗಳಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ, ಮೀನುಗಾರಿಕೆ ಇಲಾಖೆ ವತಿಯಿಂದ ಹರಾಜು ಮಾಡಿರುವ ಕೆರೆಗಳ ಹರಾಜನ್ನು ರದ್ದುಪಡಿಸಿ ಕೆರೆಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ ಗ್ರಾಮ ಪಂಚಾಯಿತಿಗಳ ಬಲವರ್ಧನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2019ರಿಂದ ಈ ವರೆಗೆ 3,699 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 3000 ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಮೂಲಕ 884 ಕಾಮಗಾರಿಗಳು ಪೂರ್ಣಗೊಂಡಿದ್ದು, 15 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ 600 ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ.20ರಷ್ಟು ಮಾತ್ರ ಹಣ ಬಳಕೆಯಾಗಿದ್ದು, ಕಾಮಗಾರಿ ವಿಳಂಬಗೊಳ್ಳುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾಮಗಾರಿಗಳು ತೀವ್ರಗತಿಯಲ್ಲಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಂಡು 11 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಾಕಿ ಇರುವ ಬಿಲ್‍ಗಳನ್ನು ಪಾವತಿ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಸಣ್ಣ ನೀರಾವರಿ ಇಲಾಖೆಯಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಬುಕ್ಕಾಪಟ್ಟಣ, ತುರುವೇಕೆರೆ ಸೇರಿದಂತೆ ಅಗತ್ಯಾನುಸಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರನ್ನೊಳಗೊಂಡಂತೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ಹಿರಿಯ ಅಧಿಕಾರಿಗಳಿಂದ ಅಧೀನ ಅಧಿಕಾರಿಗಳ ನಿಯಂತ್ರಣ ಅವಶ್ಯಕವಾಗಿದ್ದು, ರೈತರ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಬೇಕು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ರೈತರ ತೋಟಗಳಿಗೆ ಕ್ಷೇತ್ರ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಅವರಿಂದ ಮಾಹಿತಿ ಪಡೆದ ಸಚಿವರು, ನಕಲಿ ವೈದ್ಯರನ್ನು ಪತ್ತೆ ಹಚ್ಚಿ ದೂರು ದಾಖಲಿಸುವಂತೆ ಸೂಚಿಸಿದರಲ್ಲದೆ, ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಯಾವುದೇ ಕಾರಣಕ್ಕೂ ಒಂದು ಆ್ಯಂಬುಲೆನ್ಸ್‌ನಿಂದ ಮತ್ತೊಂದು ಆ್ಯಂಬುಲೆನ್ಸ್‌ಗೆ ವರ್ಗಾಯಿಸದೆ ನೇರವಾಗಿ ಆಸ್ಪತ್ರೆಗೆ ದಾಖಲಿಸಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ ನೀಡುವಂತೆ ಸೂಚನೆ ನೀಡಿದರು.
ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡುವ ಯಂತ್ರೋಪಕರಣಗಳ ಬದಲಿಗೆ ರೈತರೇ ಕೃಷಿ ಉಪಕರಣ ಖರೀದಿ ಮಾಡಲು ಅವರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮೆ ಮಾಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚುವಂತೆ ಮಾಡಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಗೂಗಲ್‌ನಲ್ಲಿ ತಪ್ಪು ಮಾಹಿತಿ: ‘ರಾಣಿಝರಿ’ ಬಿರುಕು ಬಿಟ್ಟಿತ್ತೆಂದು ಅಧಿಕಾರಿಗಳ ದೌಡು!
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ. ಎನ್. ಮಂಜುನಾಥ್, ನವಹದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ, ಕೃಷ್ಣಪ್ಪ, ವಿಧಾನ ಪರಿಷತ್ ಶಾಸಕ ಚಿದಾನಂದ ಎಂ. ಗೌಡ, ಸರ್ಕಾರದ ಕಾರ್ಯದರ್ಶಿ ಮಂಜುಳ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
