200 ಮನೆಗಳಿರುವ ವಸತಿ ಸಮುಚ್ಛಯಗಳಲ್ಲಿ ಅಮಾನಿಕೆರೆ ಕೋಡಿಹಳ್ಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸ್ಲಂ ಜನಾದೋಲನದ ಸಂಚಾಲಕ ಎ.ನರಸಿಂಹಮೂರ್ತಿ ಒತ್ತಾಯಿಸಿದರು.
ತುಮಕೂರು ನಗರದ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆದ ಅಮಾನಿಕೆರೆ ಕೋಡಿಹಳ್ಳ ಶಾಖೆ ವರ್ಷಾಚರಣೆ ಮತ್ತು ಪುನೀತ್‌ರಾಜ್‌ಕುಮಾರ್‌ರವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಗರದ ಕೋಡಿಹಳ್ಳದಲ್ಲಿ ಸ್ಲಂ ಶಾಖೆ ತೆರೆದು ಒಂದು ವರ್ಷ ಕಳೆದಿದೆ. ಸಂಘಟಿತರಾಗಿ ಬದುಕನ್ನು ಕಟ್ಟಿಕೊಳ್ಳುವ ನಿರಂತರ ಹೋರಾಟದ ಭಾಗವಾಗಿ ಜಿಲ್ಲಾಡಳಿತ ಮತ್ತು ನಗರ ಪಾಲಿಕೆ ಆಶ್ರಯ ಸಮಿತಿ ಗಮನ ಸೆಳೆಯುವಂತ ಕೆಲಸವನ್ನು ಇಲ್ಲಿನ 30 ಕುಟುಂಬಗಳು ಮಾಡಿರುವುದು ಆದರ್ಶಪ್ರಾಯವಾಗಿದೆ” ಎಂದರು.
“ನಮ್ಮ ಮುಂದಿನ ಹೋರಾಟ ಮತ್ತು ಜವಾಬ್ದಾರಿ ಹೊನ್ನೇನಹಳ್ಳಿ ಡಾನ್ ಬೋಸ್ಕೋ ಶಾಲೆಯ ಆಸುಪಾಸಿನ ಸರ್ವೇ ನಂಬರ್‌ನಲ್ಲಿ ಈಗಾಗಲೇ ಸರ್ಕಾರದಿಂದ 200 ವಸತಿ ಸಮುಚ್ಛಯಗಳ (ಮನೆಗಳ) ನಿರ್ಮಾಣವಾಗುತ್ತಿವೆ. ಈ ವಸತಿ ಸಮುಚ್ಛಯಗಳಲ್ಲಿ ಕೋಡಿಹಳ್ಳದ ಮಡಿವಾಳ(ಅಗಸ) ಮತ್ತು ಇತರೆ ವೃತ್ತಿನಿರತ 30 ಬಡಕುಟುಂಬಗಳನ್ನು ಪುನರ್ವಸತಿಗೊಳಿಸಲು ಮೊದಲ ಆದ್ಯತೆ ನೀಡಬೇಕು” ಎಂದರು.
“ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಈ ಬಗ್ಗೆ ಹಲವು ಬಾರಿ ನಗರ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಸ್ಪಂದಿಸಿದ್ದಾರೆ. ಆದ್ಯತೆ ನೀಡದೆ ಹೋದರೆ ಹೋರಾಟ ಕೈಗೆತ್ತಿಕೊಳ್ಳಲು ಸಿದ್ಧರಾಗಬೇಕಿದೆ” ಎಂದರು.
“ಪುನೀತ್ ರಾಜಕುಮಾರ್ ಅವರ ಕೆಲಸಗಳು ಮಾದರಿಯ ಕಾರ್ಯಗಳು. ಅವರು ದೈಹಿಕವಾಗಿ ಇಲ್ಲವಾದರು ಮಾನಸಿಕವಾಗಿ ನಮ್ಮ ನಡುವೆ ಇದ್ದಾರೆ” ಎಂದರು.
ಸ್ಲಂ ಸಂಘಟನೆಯ ಕಾರ್ಯದರ್ಶಿ ಅರುಣ್ ಮಾತನಾಡಿ, “ಸ್ಲಂಗಳಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಾಸ್ತವ್ಯ ಮಾಡಿ ಸ್ಲಂ ಜನರ ಸಮಸ್ಯೆ ಆಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ: ಸಚಿವ ಡಾ ಎಚ್.ಸಿ ಮಹದೇವಪ್ಪ
ಕಾರ್ಯಕ್ರಮದಲ್ಲಿ ಸ್ಲಂ ಸಮಿತಿಯ ಉಪಾಧ್ಯಕ್ಷ ಶಂಕ್ರಯ್ಯ, ಸ್ಥಳೀಯ ಮುಖಂಡರುಗಳಾದ ಮೋಹನ್‌ಕುಮಾರ್, ಕೋಡಿಹಳ್ಳ ಸ್ಲಂ ಶಾಖೆಯ ಪದಾಧಿಕಾರಿಗಳಾದ ಗಣೇಶ್, ಗೋವಿಂದರಾಜ್, ಮಂಜುನಾಥ್, ವೆಂಕಟೇಶ್, ಅಶ್ವತ್, ಜಯಮ್ಮ, ಲಕ್ಷ್ಮೀದೇವಮ್ಮ, ಕವಿತಾ, ಕೆಂಪಮ್ಮ, ಹೊನ್ನಮ್ಮ, ದೊಡ್ಡತಾಯಮ್ಮ, ಪಾಪಣಿ, ಮಂಜುಳ ಸೇರಿದಂತೆ ಇತರರು ಇದ್ದರು.