ಮಹಿಳಾ ಅಧಿಕಾರಿಗಳು ಬಂದರೆ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಾರೆಂಬ ನಂಬಿಕೆ ಗುಬ್ಬಿ ತಾಲೂಕಿನಲ್ಲಿ ಹುಸಿಯಾಗಿದೆ. ಅಧಿಕಾರಿಗಳು ಕಾಸಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ನಮ್ಮ ಆರೋಪ ಸುಳ್ಳಾಗಿದ್ದರೆ ಅವರು ಬಂದು ಆಣೆ-ಪ್ರಮಾಣ ಮಾಡಲಿ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಹರಿಹಾಯ್ದಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ತಾಲೂಕಿಗೆ ತಹಶೀಲ್ದಾರ್ ಆರತಿ ಬಿ ಅವರು ಬಂದು ಎರಡು ವರ್ಷ ಕಳೆದಿವೆ. ಆದರೂ, ಯಾವುದೇ ಪ್ರಗತಿ ಕಂಡಿಲ್ಲ. ಕೇವಲ ‘ಹೋದ ಪುಟ್ಟ – ಬಂದ ಪುಟ್ಟ’ ಎಂಬಂತೆ ಅವರು ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸರ್ಕಾರದ ಯಾವುದೇ ಆದೇಶಗಳನ್ನು ತಹಶೀಲ್ದಾರ್ ಪಾಲಿಸುತ್ತಿಲ್ಲ. ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಿಲ್ಲ. ಅಹವಾಲು ಹಿಡಿದು ಕಚೇರಿಗೆ ಬರುವ ಸಾರ್ವಜನಿಕರ ತಲೆ ಸವರಿ ಕಳುಹಿಸುತ್ತಾರೆ. ಸ್ಮಶಾನ, ಶಾಲೆಗೆ ಸರ್ಕಾರದಿಂದ ಸ್ಥಳ ಮಂಜೂರಾದರೂ ಆ ಭೂಮಿಯನ್ನು ಹದ್ದುಬಸ್ತು ಮಾಡಿ, ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವ ಕೆಲಸಗಳೂ ಆಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈಗಾಗಲೇ ಭೂ ಕಬಳಿಕೆ ಹಗರಣದಲ್ಲಿ ರಾಜ್ಯದಲ್ಲೇ ನಮ್ಮ ತಾಲೂಕು ಕಚೇರಿ ಕುಖ್ಯಾತಿ ಪಡೆದಿದೆ. ದಲ್ಲಾಳಿಗಳು, ಕಬಳಿಕೆದಾರರಿಂದ ಕಚೇರಿ ತುಂಬಿ ತುಳುಕುತ್ತಿದೆ. ಸರ್ವೇ ಇಲಾಖೆ ಸಹ ಲಂಚದ ಹಿಂದೆ ಬಿದ್ದಿದೆ. ಬಗರ್‌ಹುಕುಂ ಸಾಗುವಳಿದಾರರ ಅಹವಾಲನ್ನೂ ಕೇಳುವವರು ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಮುಖಂಡರಾದ ವೆಂಕಟೇಶ್, ಬಸವರಾಜು, ಯತೀಶ್, ಶಿವಣ್ಣ, ಸತ್ತಿಗಪ್ಪ, ಮಹದೇವ್ ಇತರರು ಇದ್ದರು.