ತುಮಕೂರು ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆ ದಿನದಿಂದ ದಿನಕ್ಕೆ ಬತ್ತುತ್ತಿದ್ದು, ಆತಂಕವನ್ನು ಹೆಚ್ಚಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಗೊರೂರು ಜಲಾಶಯದಿಂದ ಈ ಕೆರೆಗೆ ನೀರು ಹರಿಸುವ ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.
“ಬುಡಗನಹಳ್ಳಿ ಕೆರೆಯಲ್ಲಿ ಈಗಿರುವ ನೀರನ್ನು ಇನ್ನು ಒಂದೆರಡು ವಾರಗಳಷ್ಟೇ ಪೂರೈಸಲು ಸಾಧ್ಯ, ನಂತರ ಏನು ಮಾಡಬೇಕೆಂಬ ಚಿಂತೆ ಆರಂಭವಾಗಿದೆ. ಕೊಳವೆ ಬಾವಿಗಳ ಮೇಲಿನ ಅವಲಂಬನೆ ಹೆಚ್ಚುತ್ತಿದ್ದು, ಮಳೆ ಇಲ್ಲದೆ ಅಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಸತತವಾಗಿ ಬಳಕೆಯಾಗುತ್ತಿರುವುದರಿಂದ ಮೋಟಾರ್, ಪಂಪುಗಳೂ ಕೂಡ ಸುಟ್ಟು ಹೋಗುತ್ತಿವೆ. ಕೆರೆಯಲ್ಲೂ ನೀರಿಲ್ಲ, ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಾರಕ್ಕೆ ಒಮ್ಮೆ ನೀರು ಬಿಡುವುದು ಕಷ್ಟಕರವಾಗಲಿದೆ. ನಗರದಲ್ಲಿ ನೀರಿಗೆ ಹಾಹಾಕಾರ ಎದುರಾಗಬಹುದು” ಎಂದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
“ಗೊರೂರು ಜಲಾಶಯದಿಂದ ಹೇಮಾವತಿ ನಾಲೆ ಮೂಲಕ ಬುಗುಡನಹಳ್ಳಿ ಕೆರೆಗೆ ನೀರು ತುಂಬಿಸಲಾಗುತ್ತದೆ. ಹಿಂದಿನ ವರ್ಷವೂ ಇದೇ ಪರಿಸ್ಥಿತಿ ಎದುರಾಗಿದ್ದು, ಮೇ ತಿಂಗಳ ಮಧ್ಯ ಭಾಗದಲ್ಲಿ ನೀರು ಹರಿಸಲಾಗಿತ್ತು. ಉತ್ತಮ ಮಳೆಯೂ ಆಗಿತ್ತು. ಇದರಿಂದಾಗಿ ನಗರದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿತ್ತು. ಆದರೆ, ಈ ಬಾರಿ ನಾಲೆ ಆಧುನೀಕರಣ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಗಿಸಲು ಜುಲೈ ವರೆಗೂ ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದ್ದು, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಲಿದೆ” ಎನ್ನುತ್ತಾರೆ.
70 ಕಿ.ಮೀ ಹಾಗೂ 70ರಿಂದ 166 ಕಿ.ಮೀ ವರೆಗೆ ಎರಡು ಹಂತದಲ್ಲಿ ನಾಲೆಗಳ ಆಧುನೀಕರಣ ಕೆಲಸ ನಡೆಯುತ್ತಿದೆ. ₹550 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮೊದಲ ಹಂತದ (0–70 ಕಿ.ಮೀ) ಕೆಲಸ ಮುಗಿಯುತ್ತಾ ಬಂದಿದ್ದು, ಜೂನ್ ಕೊನೆ ವೇಳೆಗೆ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ₹652 ಕೋಟಿ ಮೊತ್ತದ ಎರಡನೇ ಹಂತದ (70–166 ಕಿ.ಮೀ) ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಈ ಕೆಲಸ ಮುಗಿಸಲು ಜುಲೈ ಕೊನೆಯವರೆಗೂ ಕಾಲಾವಕಾಶ ಬೇಕಾಗಬಹುದು.
ಕೆಲಸ ಪೂರ್ಣಗೊಂಡ ತಕ್ಷಣವೇ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಪರಿಶೀಲನೆಗೆ ಒಳಪಟ್ಟು, ಎಲ್ಲವೂ ಸರಿ ಇದೆ ಎಂಬುದು ಖಚಿತವಾದ ಬಳಿಕ ನೀರು ಹರಿಸಬೇಕಾಗುತ್ತದೆ. ಇಷ್ಟೆಲ್ಲ ಕೆಲಸ ಪೂರ್ಣಗೊಂಡು ನೀರು ಹರಿಸುವುದಾದರೆ ಇನ್ನೂ ಎರಡು ತಿಂಗಳು ಸಮಯ ತೆಗೆದುಕೊಳ್ಳಬಹುದು. ಅಲ್ಲಿಯವರೆಗೂ ನಗರಕ್ಕೆ ಎಲ್ಲಿಂದ ನೀರು ಪೂರೈಸುವುದು. ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡರೆ ಏನು ಮಾಡಬೇಕು ಎಂಬುದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ. ಈ ಬಗ್ಗೆ ಪಾಲಿಕೆ ತುರ್ತು ಸಭೆಯಲ್ಲಿ ಚರ್ಚಿಸಲಾಗಿದ್ದು, ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
₹1,175 ಕೋಟಿ ಮೊತ್ತದಲ್ಲಿ ಕಾಮಗಾರಿ ನಡೆಸುತ್ತಿದ್ದರೂ ನಗರದಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ. ನಾಲೆ ಆಧುನೀಕರಣ ಕಾಮಗಾರಿ ಆಮೆಗತಿಯಲ್ಲಿ ತೆವಳುತ್ತಿದೆ.
“ಜುಲೈ ವರೆಗೂ ಕೆಲಸ ನಡೆಯಲಿದ್ದು, ಮೊದಲ ಹಂತದ ಕಾಮಗಾರಿ (0–70 ಕಿ.ಮೀ) ಜೂನ್ ಕೊನೆಗೆ ಮುಕ್ತಾಯವಾಗಲಿದೆ. ಎರಡನೇ ಹಂತದ ಕೆಲಸ ಮುಗಿಸಲು ಜುಲೈ ಎರಡನೇ ವಾರದವರೆಗೂ ಸಮಯ ಬೇಕಾಗುತ್ತದೆ” ಎಂದು ಹೇಮಾವತಿ ನಾಲಾ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಆರ್.ಮುರಳೀಧರ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಸೋಮೇಶ್ವರ ಬೀಚ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ
“ಸಾಮಾನ್ಯವಾಗಿ ಜುಲೈ ವೇಳೆಗೆ ನಾಲೆಯಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ಅಷ್ಟರಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು. ಒಂದು ವೇಳೆ ಕೆಲಸ ಮುಗಿಯದಿದ್ದರೆ ಸ್ಥಗಿತಗೊಳಿಸಿ ನೀರು ಹರಿಸಲು ಅನುಕೂಲ ಮಾಡಿಕೊಡಲಾಗುವುದು. ಉಳಿದ ಕಾಮಗಾರಿಯನ್ನು ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ಸಾಮಾನ್ಯವಾಗಿ ಜನವರಿ ತಿಂಗಳವರೆಗೂ ನೀರು ಹರಿಯುತ್ತದೆ. ನೀರು ಹರಿಯುವುದು ನಿಂತ ತಕ್ಷಣ ಕೆಲಸ ಆರಂಭಿಸುವುದು ಕಷ್ಟಕರ. ನಾಲೆಯಲ್ಲಿ ನಿಂತ ನೀರು ಒಣಗಿ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣವಾದ ಬಳಿಕವಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ವರ್ಷ ಫೆಬ್ರವರಿ 15ರಿಂದ ಕೆಲಸ ಆರಂಭಿಸಿದ್ದು, ಸಹಜವಾಗಿ ತಡವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.