ಸಾವಯವ ಮತ್ತು ರೋಗ ನಿರೋಧಕ ಶಕ್ತಿ, ಹೆಚ್ಚು ಪೌಷ್ಠಿಕಾಂಶ ಹೊಂದಿರುವ ಹಲಸಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಹಲಸಿನ ಹಣ್ಣಿನ ನಾನಾ ಖಾದ್ಯಗಳು ಜನಪ್ರಿಯವಾಗಿವೆ.
ತುಮಕೂರು ಜಿಲ್ಲೆಯಲ್ಲಿ ತೆಂಗು, ಅಡಿಕೆ ನೀರಾವರಿ ಆಶ್ರಿತ ಬೆಳೆಗಳಾದರೆ, ಹುಣಸೆ, ಮಾವು, ಹಲಸು ಒಣ ಬೇಸಾಯದ ಹಣ್ಣುಗಳ ಬೆಳೆಯಾಗಿವೆ. ಈ ಬೆಳೆ ಬೆಳೆಯುವ ಪ್ರತಿಯೊಬ್ಬರೂ ಮಿಶ್ರ ಅಥವಾ ಬದು ಬೆಳೆಯಾಗಿ ಒಂದು ಕುಂಟುಂಬಕ್ಕೆ ಮೂರು, ನಾಲ್ಕಕ್ಕೂ ಹೆಚ್ಚಿಗೆ ಸಸಿಗಳನ್ನು ಬೆಳೆಸಬಹುದು. ಯಾವುದೇ ರಾಸಾಯನಿಕ ಬಳಸದೇ ಬೆಳೆಯುವ ಹಣ್ಣು ಎಂದರೆ ಅದು ಹಲಸು.
ಜಿಲ್ಲೆಯಲ್ಲಿ ಸುಮಾರು 147 ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆ ಇದೆ. ಚೇಳೂರು, ತುಮಕೂರು ಮತ್ತು ಬೆಂಗಳೂರು ಮಾರುಕಟ್ಟೆಯಲ್ಲಿ ಈ ಹಲಸು ಮಾರಾಟ ಮಾಡಲಾಗುತ್ತದೆ. ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಹಲಸಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ರೈತ ಲೋಕೇಶ್.

ಲಾಭದಾಯಕ ಬೆಳೆ:
ರೈತರು ಒಂದು ಎಕರೆಗೆ ಅಂದಾಜು 100 ಮರ ನೆಡಬಹುದು. ಒಂದು ಮರ ನಾಲ್ಕೈದು ವರ್ಷಗಳಲ್ಲಿ ಫಲ ಬಿಡಲು ಪ್ರಾರಂಭಿಸುತ್ತದೆ. ಕಸಿ ಮಾಡಿದ ಸಸಿಗಳು ಮೂರರಿಂದ ನಾಲ್ಕು ವರ್ಷಕ್ಕೆ ಕಾಯಿ ಬಿಡಲು ಶುರು ಮಾಡುತ್ತವೆ. 10 ವರ್ಷ ಮೀರಿದ ಮರ ಸುಮಾರು 100 ರಿಂದ 150 ಕಾಯಿ ಕೊಡುತ್ತದೆ. ಮಾರುಕಟ್ಟೆ ಬೆಲೆ ಲೆಕ್ಕ ಹಾಕಿಕೊಂಡರೂ ಒಂದೊಂದು ಹಣ್ಣು ಕನಿಷ್ಟ 40 ರಿಂದ ಪ್ರಾರಂಭವಾಗಿ ಉತ್ತಮ ತಳಿಯ ಹಣ್ಣು ಗರಿಷ್ಟ 500 ರೂವರೆಗೆ ಬೆಲೆ ಬಾಳುವುದರಿಂದ ರೈತರಿಗೆ ಹೆಚ್ಚಿನ ಆದಾಯ ಬರುತ್ತದೆ.
ಹಲಸಿನ ಹಣ್ಣು ಮತ್ತು ಅದರ ಉತ್ಪನ್ನಗಳಾದ ಚಿಪ್ಸ್, ಹಿಟ್ಟು, ಬೀಜಗಳು ಮತ್ತು ಉಪ್ಪಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇದು ರೈತರಿಗೆ ಉತ್ತಮ ಆದಾಯ ಗಳಿಸಲು ಸಹಾಯ ಮಾಡುತ್ತದೆ. ಹಣ್ಣನ್ನು ಸಂಸ್ಕರಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕವೂ ರೈತರು ಲಾಭ ಗಳಿಸಬಹುದು. ಹಲಸಿನ ಮರಗಳು ಬರ ನಿರೋಧಕವಾಗಿದ್ದು, ಹೆಚ್ಚಿನ ನಿರ್ವಹಣೆ ಇಲ್ಲದೆಯೂ ಬೆಳೆಯುತ್ತವೆ. ನೀರು ಮತ್ತು ಗೊಬ್ಬರವನ್ನು ಒದಗಿಸಿದರೆ ಸಾಕು, ನಂತರ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಮರಗಳ ನಡುವೆ ಬೇರೆ ವಾಣಿಜ್ಯ ಬೆಳೆಗಳನ್ನೂ ಬೆಳೆದುಕೊಳ್ಳಬಹುದು. ಹಾಗಾಗಿ ಕಡಿಮೆ ಬಂಡವಾಳ, ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಲು ಅನುಕೂಲವಾಗಲಿದೆ.
ಬಹುಪಯೋಗಿ:
ಹಲಸಿನಿಂದ ವಿವಿಧ ಖಾದ್ಯಗಳಾದ ಹಪ್ಪಳ, ಚಿಪ್ಸ್, ಚಕ್ಕುಲಿ, ನಿಪ್ಪಟ್ಟು, ದೋಸೆ, ಬೋಂಡ ಹಾಗೂ ಸಾಂಬಾರು ಮಾಡುವುದರಿಂದ ಅದರ ಮೌಲ್ಯವರ್ಧನೆ ಹೆಚ್ಚಾಗುತ್ತದೆ. ಅತಿ ಹೆಚ್ಚು ಜನಪ್ರಿಯವಾಗಿರುವ ಹಲಸಿನ ಹಲಸಿನ ಹಣ್ಣಿನ ರಸಾಯನ ಬಹುತೇಕರಿಗೆ ಅಚ್ಚುಮೆಚ್ಚು.

ರೋಗಗಳಿಗೆ ರಾಮಬಾಣ:
ಹಲಸು ಒಂದು ಸಾವಯವ ಉತ್ಪನ್ನ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ಹೆಚ್ಚು ವೃದ್ಧಿಯಾಗುತ್ತದೆ. ರಕ್ತದೊತ್ತಡ, ಅಸ್ತಮಾ, ಐರನ್ ನಿಯಂತ್ರಿಸುವ ಜತೆಗೆ ಮೂಳೆಗಳಿಗೆ ಶಕ್ತಿ ನೀಡುತ್ತದೆ.
ವಿವಿಧ ತಳಿಗಳು ಲಭ್ಯ:
ರುದ್ರಾಕ್ಷಿ ಹಲಸು ಅರಿಶಿಣ ವರ್ಣ, ರುದ್ರಾಕ್ಷಿ ಹಲಸು ಕೆಂಪು ವರ್ಣ, ಚಂದ್ರ ಹಲಸು, ಶಿವಮೊಗ್ಗ ಹಳದಿ, ಮೇಣರಹಿತ ಹಲಸು, ರುದ್ರಾಕ್ಷಿ, ಜಾಲಮಂಗಲ ಶಿಡ್ಲಘಟ್ಟ, ಸಿಂಗಾಪುರ, ಮದ್ದೂರ ಬಿಳಿ, ಲಾಲ್ ಬಾಗ್, ಮಂಕಳಲೆ ಚಂದ್ರ ಹಲಸು, ಸುವರ್ಣಋತು ಹಲಸು, ಸದಾನಂದ, ಲಾಲ್ಬಾಗ್ ಮಧುರ, ತೂಬುಗೆರೆ ಚಂದ್ರ ಬುಕ್ಕೆ, ಹೇಮ ಚಂದ್ರ ಹಲಸು ತಳಿಯ ಸಸಿಗಳು ತೋಟಗಾರಿಕೆ ಮತ್ತು ಜಿಕೆವಿಕೆ ವಿಜ್ಞಾನ ಕೇಂದ್ರಗಳಲ್ಲಿ ದೊರೆಯುತ್ತವೆ.
ಸಿದ್ದು ಹಲಸು – ಶಂಕರ ಹಲಸು:
ತುಮಕೂರು ಜಿಲ್ಲೆಯಲ್ಲಿ ಹಲಸಿನ ಹಣ್ಣಿನಲ್ಲೆ ಉತ್ಕೃಷ್ಟ ಎಂದು ಗುರುತಿಸಲಾಗಿರುವ ಸಿದ್ದು ಹಲಸು, ಶಂಕರ ಹಲಸಿಗೆ ಪೇಟೆಂಟ್ ದೊರೆತಿದೆ. ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ರೈತರ ಹೆಸರನ್ನೇ ಹಲಸಿನ ತಳಿಗೆ ಹೆಸರಿಡಲಾಗಿದೆ. ಚೇಳೂರಿನಲ್ಲಿ ಅಪರೂಪದ ಹಲಸು ತಳಿಯನ್ನು ಸಂಶೋಧನೆ ಮಾಡಿದ್ದು, ಸಿದ್ದು ಹಲಸು ತಳಿಯನ್ನು ಕಂಡುಹಿಡಿದ ರೈತ ಸಿದ್ದೇಶ್ ಅವರಿಗೆ ಮೊದಲಬಾರಿಗೆ ರಾಷ್ಟ್ರೀಯ ತಳಿ ಸಂರಕ್ಷಣೆ ಪ್ರಶಸ್ತಿ ಲಭಿಸಿದೆ. ಈ ಹಲಸಿನ ತಳಿಯ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದೆ. ಈ ತಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ‘ಸಿದ್ದು ಹಲಸು’ ಎಂದು ನಾಮಕರಣ ಮಾಡಿದೆ. ಈ ಎರಡೂ ಹಲಸಿನ ತಳಿಗಳು ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿವೆ.
ಮಾರುಕಟ್ಟೆ:
ರಾಜ್ಯದಲ್ಲಿಯೇ ತುಮಕೂರಿನಲ್ಲಿ ಅತಿ ಹೆಚ್ಚು ಹಲಸಿನ ಮರಗಳಿದ್ದು, ಹಲಸಿನ ಹಣ್ಣು ಉತ್ಪಾದನೆಯಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಗುಬ್ಬಿ ತಾಲೂಕಿನ ಚೇಳೂರು ಮಾರುಕಟ್ಟೆ ದಕ್ಷಿಣ ಭಾರತದಲ್ಲಿಯೇ ದೊಡ್ಡ ಹಲಸಿನ ಮಾರುಕಟ್ಟೆ ಇದೆ. 147 ಹೆಕ್ಟೇರ್ ಪ್ರದೇಶದಲದಲ್ಲಿ ಹಲಸಿನ ಮರಗಳಿವೆ. ವರ್ಷಕ್ಕೆ 5279 ಟನ್ ಇಳುವರಿ ಇದೆ. ಚೇಳೂರು ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಮಾರುಕಟ್ಟೆ ನಡೆಯುತ್ತದೆ. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಇಲ್ಲಿಗೆ ಹಣ್ಣು ತರುತ್ತಾರೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಪ್ರತಿ ಹಣ್ಣಿಗೆ 40 ರೂಪಾಯಿಂದ 500 ರೂಪಾಯಿಗೂ ಹಣ್ಣು ಮಾರಾಟವಾಗುತ್ತಿದೆ. ಇಲ್ಲಿಗೆ ಹೊರ ರಾಜ್ಯದಿಂದಲೂ ಹಣ್ಣನ್ನು ಖರೀದಿಸಲು ಗ್ರಾಹಕರು ಬರುತ್ತಾರೆ.
ಆಂಧ್ರ, ಅನಂತಪುರ, ಹಿಂದೂಪುರ, ಬಳ್ಳಾರಿ, ಮಹಾರಾಷ್ಟ್ರ, ಸೊಲ್ಲಾಪುರ, ದಾವಣಗೆರೆ ಇಲ್ಲಿನ ವರ್ತಕರು ಬರುತ್ತಾರೆ. ಚೇಳೂರು ಮಾರುಕಟ್ಟೆಯಿಂದ ದೇಶದ 8 ಕ್ಕೂ ಹೆಚ್ಚು ರಾಜ್ಯಗಳಿಗೆ ಹಣ್ಣು ರಫ್ತು ಮಾಡಲಾಗುತ್ತದೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ. ಮಹಾರಾಷ್ಟ, ರಾಜಸ್ತಾನ,ಗುಜರಾತ್, ನವದೆಹಲಿ, ಉತ್ತರ ಪ್ರದೇಶಕ್ಕೆ ಹಣ್ಣು ರವಾನೆಯಾಗುತ್ತದೆ. ಮೇ ಪ್ರಾರಂಭದಿಂದ ಜುಲೈವರೆಗೂ ಚೇಳೂರಿನಲ್ಲಿ ಹಲಸು ಹಣ್ಣಿನ ಮಾರುಕಟ್ಟೆ ನಡೆಯತ್ತದೆ. ಹಳದಿ, ಕೆಂಪು, ಬಿಳಿ ಬಣ್ಣದ ಹಲಸಿನ ಹಣ್ಣು ಬರುತ್ತದೆ. ಕೆಂಪು ಹಲಸಿಗೆ ಭಾರಿ ಬೇಡಿಕೆಯಿದೆ.