ತುಮಕೂರು ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಳೆ ವಿದ್ಯಾರ್ಥಿ ಪ್ರಣವ್ ನಟನೆ ಮತ್ತು ನಿರ್ಮಾಣದ ʼಅಂತರ್ಯಾಮಿʼ ಚಿತ್ರದ ಪೋಸ್ಟರ್‌ನ್ನು ಗೃಹ ಸಚಿವ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ ಪರಮೇಶ್ವರ್ ಬಿಡುಗಡೆ ಮಾಡಿದರು.
ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, “ಇತ್ತೀಚಿನ ದಿನದಲ್ಲಿ ಸಾಮಾಜಿಕ ಮಾಧ್ಯಮಗಳ ಗೀಳು ಯುವ ಜನತೆಯನ್ನು ಅಪಾರವಾಗಿ ಕಾಡುತ್ತಿದೆ. ಚಿಕ್ಕ ಮಕ್ಕಳು ಇಂದು ಮೊಬೈಲ್ ವ್ಯಾಮೋಹಕ್ಕೆ ಬಿದ್ದು ತಮ್ಮ ಅಮೂಲ್ಯವಾದ ಬಾಲ್ಯದ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳು ಹಾಗೂ ಯುವಕರು ದಾರಿ ತಪ್ಪಿಸುವಂತಹ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ತಮ್ಮ ಜೀವನವನ್ನು ಸುಂದರಾಗಿಸಿಕೊಳ್ಳಬೇಕು. ಈ ನೆಲಗಟ್ಟಿನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾ ಸಾಮಾಜಿಕ ಜಾಲತಾಣಗಳಿಂದ ಬಳಲುತ್ತಿರುವ ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು.
“ಅಂತರ್ಯಾಮಿ ಸಿನಿಮಾದ ನಾಯಕ ನಟ ನಮ್ಮ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ. ಜೊತೆಗೆ ಮತ್ತೋರ್ವ ಹಳೇ ವಿದ್ಯಾರ್ಥಿ ವಿನಯ್ ಕಾವ್ಯಕಾಂತಿ ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾದಲ್ಲಿ ಮಾಧ್ಯಮ ವಿದ್ಯಾರ್ಥಿಗಳು ಅಭಿನಯಿಸಿರುವುದು ಇನ್ನೂ ವಿಶೇಷ. ಈ ಚಿತ್ರ ಅಭೂತ ಪೂರ್ವ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ.ಸಾಣಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಮೊದಲಾದವರು ಹಾಜರಿದ್ದರು.
ಈ ಚಿತ್ರದಲ್ಲಿ ನಾಯಕ ನಟನಾಗಿ ಪ್ರಣವ್ ನಟಿಸಿದ್ದು, ನಾಯಕಿಯಾಗಿ ಮೋಹಿರಾ ಆಚಾರ್ಯ ಅಭಿನಯಿಸಿದ್ದಾರೆ. ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಉದಯ್, ರುದ್ರಮುನಿ ಪಂಡಿತ್, ರೇಣುಕಾಂಬ, ಶರತ್ ಘಾಟಿ, ಶ್ರೀ ಕೃಷ್ಣ ಮಂಜೀವಾ, ಬೇಬಿ ಹಾನ್ಸಿ, ಹೇಮ ಮಾಲಿನಿ, ಬಾಲಕೃಷ್ಣ ಬರಗೂರು, ವಸಂತ್, ಯೋಗೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ತುಮಕೂರು | ರಾಜೇಂದ್ರ ಕೊಲೆ ಸಂಚು ಪ್ರಕರಣ; ಪ್ರಮುಖ ಆರೋಪಿ ಪೊಲೀಸರಿಗೆ ಶರಣು
ಈ ಚಿತ್ರಕ್ಕೆ ಎಸ್ ಬಾಲು ಛಾಯಾಗ್ರಹಣ ನಿರ್ವಹಿಸಿದರೆ, ದೇಸೀ ಮೋಹನ್ ಅವರ ಸಂಗೀತವಿದೆ. ಸಾಹಿತ್ಯವನ್ನು ವಿನಯ್ ಕಾವ್ಯಕಾಂತಿ ಬರೆದಿದ್ದಾರೆ. ನೃತ್ಯ ಸಂಯೋಜನೆಯನ್ನು ಬಾಲ ಮಾಸ್ಟರ್ ನಿರ್ವಹಿಸಿದರೆ, ಅರವಿಂದರಾಜ್ ಸಂಕಲನ ಮಾಡಿದ್ದಾರೆ. ಇನ್ನು ತಾಂತ್ರಿಕ ಸಲಹೆಯನ್ನು ಶ್ರೀಕಾಂತ್ ಶ್ರಾಪ್ ನೀಡಿದ್ದಾರೆ. ಎಂಜೆಎಸ್ಪಿಆರ್ ಯವರು ಪಿಆರ್‌ಓ ಕಾರ್ಯನಿರ್ವಹಿಸಿದ್ದರೆ, ರವಿಶಂಕರ್ ಅವರು ಸಹ ನಿದೇಶನ¸ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ವಸಂತ್, ನಾಗರಾಜ್ ಹೂಗಾರ್, ಗೌತಮ್ ವಿ. ಅರೆಯೂರು ಸಾಥ್ ನೀಡಿದ್ದಾರೆ.