ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಕಲೆಯಲ್ಲಿ, ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ಒಂದು ಸ್ಥಾನ ಪಡೆದುಕೊಂಡಿದೆ. ಇದನ್ನು ಗುರುತಿಸುವಂತಹ ಕೆಲಸ ವ್ಯವಸ್ಥಿತವಾಗಿ ಆಗಿರಲಿಲ್ಲ. ಹಾಗಾಗಿ, ಈ ಎಲ್ಲವನ್ನು ಇಡೀ ರಾಜ್ಯಕ್ಕೆ ಪರಿಚಯಿಸುವುದಕ್ಕೆ ತುಮಕೂರು ದಸರಾ ಉತ್ಸವ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ತುಮಕೂರು ದಸರಾ ಉತ್ಸವದ ಅಂಗವಾಗಿ ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಪ್ರೊ ಹೆಚ್.ಜಿ. ಸಣ್ಣಗುಡ್ಡಯ್ಯ ಹಾಗೂ ವೀಚಿ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ತಮ್ಮ ಮಾತಿನ ಮಧ್ಯೆ ತುಮಕೂರು ದಸರಾ ಉತ್ಸವ ಆಚರಣೆಯ ಕುರಿತು ಸ್ವಾರಸ್ಯಕರ ಘಟನೆ ಹಂಚಿಕೊಂಡ ಗೃಹ ಸಚಿವರು, “ತುಮಕೂರು ದಸರಾ ಆಚರಣೆ ಮಾಡುವ ಕುರಿತು ಮುಖ್ಯಮಂತ್ರಿಗಳ ಹತ್ತಿರ, ‘ಸರ್ ನಾವೊಂದು ಹಬ್ಬ ಮಾಡಬೇಕು, ತುಮಕೂರು ದಸರಾ ಅಂತ ಮಾಡಬೇಕು’ ಅಂತ ಹೇಳಿದೆ. ಅದಕ್ಕೆ ಅವರು, ‘ನಮಗೆ ಕಾಂಪಿಟೇಷನ್ ಮಾಡುತ್ತೀರಾ?’ ಅಂದ್ರು. ‘ಮೈಸೂರು ದಸರಾಕ್ಕೆ ಕಾಂಪಿಟೇಷನ್ ಮಾಡೋದಕ್ಕೆ ಯಾರಿಗಾದರೂ ಸಾಧ್ಯವಾಗುತ್ತಾ? ವಿಶ್ವವಿಖ್ಯಾತ ದಸರಾದ ಹತ್ತಿರಾನೂ ಬರೋದಕ್ಕೆ ಆಗೋದಿಲ್ಲ ಸರ್. ನಮ್ಮೂರ ಹಬ್ಬ ನಾವು ಮಾಡಿಕೊಳ್ತೀವಿ ಅಂದೆ’. ಆಗ ಮುಖ್ಯಮಂತ್ರಿಗಳು, ‘ಇಲ್ಲ, ಇಲ್ಲ, ಮಾಡಿ. ಬಹಳ ಒಳ್ಳೆಯದು ಅಂದ್ರು’ ಎಂದು ತುಮಕೂರು ದಸರಾ ಆಯೋಜನೆಯ ಬಗ್ಗೆ ಸಿಎಂ ಜೊತೆಗಿನ ಮಾತುಕತೆಯನ್ನು ವಿವರಿಸಿದರು. ಈ ವೇಳೆ ನೆರೆದಿದ್ದವರೂ ಕೂಡ ನಕ್ಕರು.

“ಕಳೆದ ಒಂಭತ್ತು ದಿನಗಳಿಂದ ಬಹಳ ವ್ಯವಸ್ಥಿತವಾಗಿ, ಮೈಸೂರು ದಸರಾ ಯಾವ ರೀತಿ ಆಗುತ್ತೋ ಆದೇ ರೀತಿಯಲ್ಲಿ ಮಹಿಳಾ ದಸರಾ, ಕ್ರೀಡಾ ದಸರಾ, ಯುವ ದಸರಾ ಎಲ್ಲಾ ಸೇರಿ ವಿಜೃಂಭಣೆಯಿಂದ ತುಮಕೂರು ದಸರಾ ಉತ್ಸವ ನಡೆಯುತ್ತಿದೆ” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲೆಯಲ್ಲಿನ ಬೆಳ್ಳಾವೆ ನರಹರಿಶಾಸ್ತ್ರಗಳು, ಚಿ. ಉದಯ್ ಶಂಕರ್, ಬರಗೂರು ರಾಮಚಂದ್ರಪ್ಪ, ಎಸ್. ಜಿ. ಸಿದ್ದರಾಮಯ್ಯ, ದೊಡ್ಡರಂಗೇಗೌಡರು ಸೇರಿದಂತೆ ಅನೇಕರು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಾಹಿತಿಗಳು ಎನಿಸಿಕೊಂಡವರು ಯಾವಾಗಲೂ ಸಮಾಜಮುಖಿಯಾಗಿರುತ್ತಾರೆ. ಸಮಾಜದ ಆಗುಹೋಗುಗಳನ್ನು ತನ್ನ ದೃಷ್ಟಿಕೋನದಲ್ಲಿ ನೋಡಿ ಕಾವ್ಯ, ಗದ್ಯ ರೂಪದಲ್ಲಿ ಬರೆಯುತ್ತಾರೆ. ಬಸವಣ್ಣನವರು ನಮ್ಮ ಜೀವನವನ್ನು ಅವರ ಒಂದೊಂದು ವಚನದಲ್ಲೂ ಬರೆದು ಹೋಗಿದ್ದಾರೆ. ಅದನ್ನು ನಾವು ಆಧುನಿಕ ಜಗತ್ತಿಗೆ ವಿಶ್ಲೇಷಣೆ ಮಾಡಿಕೊಡಬೇಕು. ಮಹಿಳೆಯರ ಸಮಸ್ಯೆಗೆ ಅಕ್ಕ ಮಹಾದೇವಿಯವರ ವಚನಗಳನ್ನು ಬರೆದಿದ್ದಾರೆ. ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದರ ಬಗ್ಗೆಯೂ ಚರ್ಚೆ ಮಾಡಬೇಕು” ಎಂದು ಸಚಿವರು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಬೀದರ್ | ʼವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ : ಸಾಣೇಹಳ್ಳಿ ಶ್ರೀ
ನಮ್ಮ ದೇಶದಲ್ಲಿ ಕಾರ್ಮಿಕರನ್ನು ಮನುಷ್ಯರಂತೆ ಕಾಣಲು ಇನ್ನೂ ಆಗಿಲ್ಲ ಅನ್ನೋದೆ ಬೇಸರದ ಸಂಗತಿ. ಕಾರ್ಮಿಕರು ನಮಗಾಗಿಯೇ ದುಡಿಯಲು ಇದ್ದಾರೆ ಎಂಬ ಭಾವನೆ ಹಲವರಲ್ಲಿದೆ. ಈ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ. ನಮ್ಮಲ್ಲಿ ‘ಪಿವೋನ್’ಗಳನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂದು ನಾವು ಯೋಚನೆ ಮಾಡಬೇಕು. ಆದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಾರ್ಮಿಕರಿಗೆ ಸಮಾನವಾದ ಸ್ಥಾನ ಕೊಟ್ಟಿದ್ದಾರೆ. ನಾನು ಅಸ್ಟ್ರೇಲಿಯಾದಲ್ಲಿ ಓದುವಾಗ ನಮ್ಮ ವಿಭಾಗದಲ್ಲಿ ಕಿಮ್ ಬೆನೆಟ್ ಎಂಬ ಅಟೆಂಡರ್ ಇದ್ದ. ಆತನಿಗೆ ಪ್ರೊಫೆಸರ್‌ಗಳು ಏನಾದರೂ ಕೆಲಸ ಹೇಳುವಾಗ, ತುಂಬಾ ವಿನಮ್ರ ರೀತಿಯಲ್ಲಿ ಹೇಳುತ್ತಿದ್ದರು. ಆದರೆ, ನಮ್ಮಲ್ಲಿ ಕೇಳುವ ಪದ್ಧತಿಯೇ ಇಲ್ಲ. ಸಮಾನತೆ ಬಗ್ಗೆ ಮಾತನಾಡುವಾಗ ಕಾರ್ಮಿಕರ ಬಗ್ಗೆಯೂ ಚರ್ಚೆ ಆಗಬೇಕು ಎಂದರು.
ಸಮಾಜದ ಆಗು-ಹೋಗುಗಳ ಕುರಿತು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಮರ್ಶಿಸುವ ಸಾಹಿತಿಗಳು ಸಮಾಜದ ನಿಜವಾದ ಸಾಕ್ಷಿಪ್ರಜ್ಞೆಗಳಾಗಿದ್ದಾರೆ. ವಿಶ್ವವಿದ್ಯಾನಿಲಯಗಳು ಕೇವಲ ಪದವಿಗಳನ್ನು ನೀಡುತ್ತವೆ. ಆದರೆ ಭಾರತದ ಸಂಸ್ಕೃತಿ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿಸುತ್ತದೆ. ಭಾರತದ ಮೂಲ ಸಂಸ್ಕೃತಿ ಪರಂಪರೆಯ ಬಗ್ಗೆ ವಚನಕಾರರು, ಸಾಹಿತಿಗಳು, ಚಿಂತಕರು ತಿಳಿಸಿರುವ ಕಾನೂನು ವ್ಯವಸ್ಥೆ, ಅಧುನಿಕ ಯುಗದಲ್ಲಿ ಮಹಿಳೆಯ ಪಾತ್ರ, ಸಮಾನತೆ, ಬಹುತ್ವ ವಿಷಯಗಳ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಾಸಕ ಎಂ. ಟಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಸಾಹಿತಿ ನಾಗಭೂಷಣ ಬಗ್ಗನಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಹಿರಿಯ ಪತ್ರಕರ್ತ ಎಸ್. ನಾಗಣ್ಣ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಚಿತ್ರ ಕಲಾವಿದರಾದ ಕೋಟೆಕುಮಾರ್, ಪ್ರಭು ಹರಸೂರು, ಲಕ್ಷ್ಮಣ್ ದಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಕವಿಗೋಷ್ಠಿ ಉಪಸಮಿತಿ ಅದ್ಯಕ್ಷ ಬಾಲಗುರುಮೂರ್ತಿ, ದಸರಾ ಕವಿಗೋಷ್ಠಿ ಸಮಿತಿ ಸದಸ್ಯರಾದ ಹರೀಶ್ ಆಚಾರ್ಯ ಹಾಗೂ ರಂಗನಾಥ ಕೆ. ಮರಡಿ, ಮತ್ತಿತರರು ಉಪಸ್ಥಿತರಿದ್ದರು.
