ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತುಮಕೂರಿನ ವಾಣಿಜ್ಯ ತೆರಿಗೆ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
ತುಮಕೂರು ನಗರದ ಹೊರವಲಯದ ರಂಗಾಪುರ-ಅಂತರಸನಹಳ್ಳಿ ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ಬೇವು ಲೇಪಿತ ಯೂರಿಯಾವನ್ನು ಸಾಗಣೆ ಮಾಡುತ್ತಿದ್ದ ಲಾರಿಯ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಟಿ ಆರ್ ಕೃಷ್ಣಕುಮಾರ್ ನಿರ್ದೇಶದನ ಮೇರೆಗೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ನಾಗರಾಜು ಸಿ ಗಂಗನಗೌಡರ್, ಸಿಟಿಓ ನಾಗರಾಜು ಎಸ್, ಸಿಟಿಐ ಹರ್ಷಿತ ಅವರು ಲಾರಿಯನ್ನು ತಡೆದು ದಾಖಲಾತಿ ಪರಿಶೀಲಿಸಿದಾಗ ದಾಖಲಾತಿ ಪ್ರಕಾರ ಸರ್ಕಾದ ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ವಾಸ್ತವ ಸರ್ಕಾರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಗಂಗಾವತಿಯಿಂದ ತುಂಬಿಕೊಂಡು ಸೇಲಂ, ತಮಿಳುನಾಡಿಗೆ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಲಾರಿಯನ್ನು ವಶಕ್ಕೆ ಪಡೆದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಸಗೊಬ್ಬರ ಸಂಬಂಧ ಪರಿಶೀಲನೆಗಾಗಿ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪನವರಿಗೆ ಮಾಡಿದ ಮನವಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಸಂಬಂಧ ದಾಖಲಾತಿ ಪರಿಶೀಲಿಸಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
“ಕೃಷಿ ಬಳಕೆಗೆ ಮೀಸಲಾದ ಸರ್ಕಾರದ ಸಹಾಯ ಧನದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಉದ್ದೇಶಕ್ಕೆ ಅಂತಾರಾಜ್ಯ ಸಾಗಾಣಿಕೆ ನಿಷೇಧವಿದ್ದರೂ ಸಹ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಈ ಸಂಬಂಧ ಹೆಚ್ಚಿನ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜ್ಯದಲ್ಲಿ ಬಿಜೆಪಿ ಒಂದಂಕಿ ಸೀಟು ದಾಟಲ್ಲ : ಸಚಿವ ರಾಮಲಿಂಗಾರೆಡ್ಡಿ
ಈ ಸಂಬಂಧ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪನವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
