ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳಿಗೆ ತಾವು ಮಾರಾಟ ಮಾಡಿರುವ ಕೊಬ್ಬರಿಗೆ ನಿಗದಿಯಾಗಿರುವ ನ್ಯಾಯಯುತ ಬೆಲೆ ಸಿಕ್ಕಿದೆಯೇ ಎಂದು ಲೆಕ್ಕ ಹಾಕಿ ಕೈ ಕೈ ಹಿಸುಕಿಕೊಂಡು ಅಸಹಾಯಕತೆ ತೋರುತ್ತಿದ್ದಾರೆ. ಕಾರಣ ಕೇಳಿದರೆ ಕೊಬ್ಬರಿ ಖರೀದಿ ಮಾಡುತ್ತಿರುವ ನಾಫೆಡ್ ಕೇಂದ್ರಗಳತ್ತ ಕೈತೋರುತ್ತಾರೆ.
ಚೀಲದ ತೂಕ 750 ಗ್ರಾಂನಷ್ಟು ಹಾಗೂ ಟ್ರಾನ್ಸಿಟ್ ಲಾಸ್ ಮತ್ತು ಮಾಯಿಶ್ಚರ್ ಲಾಸ್ ಎಂಬ ಕಾರಣಕ್ಕೆ ಮತ್ತೆ ಹೆಚ್ಚುವರಿ 300 ಗ್ರಾಂಗಳಷ್ಟು ಕೊಬ್ಬರಿಯನ್ನು ಖರೀದಿ ಅಧಿಕಾರಿಗಳು ರೈತರಿಂದ ವಸೂಲು ಮಾಡಿಕೊಳ್ಳುತ್ತಿದ್ದಾರೆ. ಒಟ್ಟು ಒಂದು ಒಂದೂಕಾಲು ಕೆಜಿಯಷ್ಟು ರೈತರ ಕೊಬ್ಬರಿ ನಾಫೆಡ್ ಕೇಂದ್ರಕ್ಕೆ ಹೆಚ್ಚುವರಿ ಸಿಗುತ್ತಿದೆ. ಇದು 35 ಕೆಜಿ ತೂಗುವ ಚೀಲದ ಲೆಕ್ಕ. ಒಂದು ಕ್ವಿಂಟಾಲ್‌ಗೆ 35 ಕೆಜಿಯ ಲೆಕ್ಕದಲ್ಲಿ ಮೂರು ಚೀಲ ಕೊಬ್ಬರಿ ಕೊಟ್ಟಂತಾಗುತ್ತದೆ.
“35 ಕೆಜಿ ಕೊಬ್ಬರಿ ತೂಗುವ ಮೂರು ಚೀಲಗಳನ್ನು ರೈತರು ನಾಫೆಡ್‌ಗೆ ಮಾರಾಟ ಮಾಡುತ್ತಾರೆ. ಮೂರೂ ಚೀಲಗಳಿಂದ 750 ಗ್ರಾಂ ಪ್ರತಿಚೀಲ ಹಾಗೂ ಟ್ರಾನ್ಸಿಟ್ ಲಾಸ್ ಮತ್ತು ಮಾಯಿಶ್ಚರ್ ಲಾಸ್ ಎಂಬೆರಡು ಕಾರಣಗಳಿಂದ ಸಿಗುವ ಹೆಚ್ಚುವರಿ 300 ಗ್ರಾಂ ಪ್ರತಿಚೀಲ ಕೊಬ್ಬರಿಯ ಲೆಕ್ಕ ಹಾಕಿದರೆ, ಕ್ವಿಂಟಾಲ್ ಒಂದಕ್ಕೆ ಎಷ್ಟು ಕೊಬ್ಬರಿಯನ್ನು ಪುಕ್ಕಟೆ ಕೊಟ್ಟಂತಾಯಿತು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧನಂಜಯ ಆರಾಧ್ಯ ಪ್ರಶ್ನಿಸಿದರು.
“ಅಧಿಕಾರಿಗಳು ಮತ್ತು ಹಮಾಲರು ಶಾಮೀಲಾಗಿ ನಡೆಸುತ್ತಿರುವ ರೈತರ ಮೇಲಿನ ಶೋಷಣೆ. ಇದು ಅಕ್ಷಮ್ಯ. ಮೋಸಹೋದ ರೈತರು ಭಯಭೀತಿ ಬಿಟ್ಟು ಪ್ರಶ್ನಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ನಾಫೆಡ್ ಕೇಂದ್ರಗಳ ಹಗರಣಗಳ ಬಗ್ಗೆ ರೈತ ಚಳವಳಿ ನಿರ್ಣಾಯಕ ಹೋರಾಟಗಳನ್ನು ಹಮ್ಮಿಕೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಬೆಲೆ ಕಾವಲು ಸಮಿತಿಯ ರಾಜ್ಯಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ, “ಇದು ಕೊಬ್ಬರಿ ಖರೀದಿಯಲ್ಲಿ ರೈತರಿಗೆ ಇಲ್ಲಿ ನಿತ್ಯ ಆಗುತ್ತಿರುವ ಮೋಸ. ತುಮಕೂರು, ಮೈಸೂರು ಹಾಗೂ ಚಾಮರಾಜನಗರಗಳಲ್ಲಿ ಖರೀದಿ ಮಾಡುತ್ತಿರುವುದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ (KSAMB- Karnataka state agriculture marketing board). ಇನ್ನುಳಿದ 6 ಜಿಲ್ಲೆಗಳಲ್ಲಿ ಖರೀದಿ ಮಾಡುತ್ತಿರುವ ಏಜೆನ್ಸಿ ಯಾವುದೆಂದರೆ, ಮಾರ್ಕೆಟಿಂಗ್ ಫೆಡರೇಶನ್” ಎಂದು ತಿಳಿಸಿದರು.
“ಈ ಯೋಜನೆಯಡಿಯಲ್ಲಿ ಹಿಂದೆ ಖರೀದಿ ಮಾಡುತ್ತಿದ್ದುದು ಮಾರ್ಕೆಟಿಂಗ್ ಫೆಡರೇಶನ್‌ನವರು. ಈ ವರ್ಷವೂ ಖರೀದಿ ಮಾಡುವ ಅವಕಾಶವನ್ನು ಆ ಫೆಡರೇಶನ್‌ಗೆ ನೀಡಲಾಗಿತ್ತು. ಆದರೆ, ನೊಂದಣಿ ಮಾಡಿಸುವಾಗ ಅಕ್ರಮ ಮಾಡಿ ತಮಗೆ ಬೇಕು-ಬೇಕಾದವರಿಗೆ ನೊಂದಣಿ ಮಾಡಿಸಿಕೊಂಡಿದ್ದರು. ಹೆಚ್ಚು ಕೊಬ್ಬರಿ ಉತ್ಪಾದಿಸುವ ಪ್ರದೇಶಗಳ ರೈತರಿಗೆ ಅದರಿಂದ ಅನ್ಯಾಯವಾಯಿತು. ಹಾಗಾಗಿ ಆಗ ಆ ನೊಂದಣಿ ಪ್ರಕ್ರಿಯೆಯನ್ನು ರದ್ದು ಮಾಡಿಸಿದ್ದೆವು. ನಂತರ ನಮ್ಮ ತುಮಕೂರು ಜಿಲ್ಲೆ, ಮೈಸೂರು ಮತ್ತು ಚಾಮರಾಜನಗರದಲ್ಲಿ ಮತ್ತೆ ಕೃಷಿ ಮಾರಾಟ ಮಂಡಳಿಗೆ ಕೊಬ್ಬರಿ ಖರೀದಿಸುವ ಅವಕಾಶ ಕೊಡಲಾಯಿತು. ಆದರೆ, ಬೇರೆ ಜಿಲ್ಲೆಗಳಲ್ಲಿ ಆ ಮಾರ್ಕೆಟಿಂಗ್ ಫೆಡರೇಶನ್‌ಗೆ ಖರೀದಿ ಮಾಡುವ ಅವಕಾಶ ಇನ್ನೂ ಇದೆ. ಇಂಥ ನಿಲುವುಗಳನ್ನು ರಾಜ್ಯದ ತೆಂಗು ಬೆಳೆಗಾರ ಹೇಗೆ ಅರ್ಥೈಸಿಕೊಳ್ಳಬೇಕು” ಎಂದು ಶ್ರೀಕಾಂತ್ ಕೆಳಹಟ್ಟಿ ಸರ್ಕಾರಗಳನ್ನು ಪ್ರಶ್ನಿಸುತ್ತಾರೆ.
“ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಗ್ರೇಡಿಂಗ್ ನೆಪದಲ್ಲಿ ರೈತರಿಂದ ಅಧಿಕಾರಿಗಳು ಹಾಗೂ ಹಮಾಲರು ಹಣ ಸುಲಿಗೆ ಮಾಡುತ್ತಿದ್ದಾರೆ. ಈ ಸುಲಿಗೆ ದಂಧೆಯನ್ನು ನಿಲ್ಲಿಸಬೇಕಾಗಿದೆ. ಮಾರಾಟ ಇಲಾಖೆ ಮುಂದಿನ ದಿನಗಳಲ್ಲಿ ನೇರವಾಗಿ ಗ್ರೇಡಿಂಗ್ ಮಷಿನ್ ತಂದು ಪ್ರತಿ ಖರೀದಿ ಕೇಂದ್ರದಲ್ಲೂ ಅಳವಡಿಸಿಕೊಳ್ಳಬೇಕು. ಇದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು. ಅಧಿಕಾರಿ ಮತ್ತು ಹಮಾಲರ ದಂಧೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ” ಎಂದರು.
“ಪ್ರತಿ ಚೀಲಕ್ಕೆ 300 ಗ್ರಾಂ ಅಂದರೆ ಒಟ್ಟು 2,72,500 ಕೆಜಿಯಂತೆ ₹120 ಗುಣಿಸಿದರೆ, 3 ಕೋಟಿ 27 ಲಕ್ಷದಷ್ಟು. ಇದು ತುಮಕೂರು ಜಿಲ್ಲೆಯ ಅಂಕಿ ಅಂಶ ಮಾತ್ರ. ಚಿಕ್ಕನಾಯಕನಹಳ್ಳಿ ತಾಲೂಕು ಒಂದರಲ್ಲೇ 300 ಗ್ರಾಂ ಹೆಚ್ಚುವರಿ ನೀಡಲಾಗುವ ಕೊಬ್ಬರಿಯಿಂದ ಒಟ್ಟು 56,20,070 ಲಕ್ಷಗಳಷ್ಟಾಗುತ್ತದೆ. ಇದೇ ರೀತಿ ರಾಜ್ಯದ ಎಲ್ಲ ಖರೀದಿ ಕೇಂದ್ರಗಳಲ್ಲಿ ಪ್ರತಿ ಚೀಲಕ್ಕೆ 300 ಗ್ರಾಂನಂತೆ ಲೆಕ್ಕ ಹಾಕಿದರೆ ರೈತರಿಗೆ 7 ಕೋಟಿ 12 ಲಕ್ಷಗಳಷ್ಟು ಮೋಸವಾಗುತ್ತಿದೆ” ಎಂದು ಹೇಳಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಮಾತನಾಡಿ, “ಭ್ರಷ್ಟ ವ್ಯವಸ್ಥೆಗೆ ಹೊಂದಿಕೊಂಡು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳಿ ಎಂಬಂತೆ ಬಲವಂತವಾಗಿ ರೈತರಿಗೆ ಒಪ್ಪಿಸಿದಂತೆ ಕಾಣುತ್ತಿದೆ” ಎಂದರು.
“ಸರಕು ಸಾಗಣೆ ವಾಹನಗಳನ್ನು ಬಾಡಿಗೆ ಮಾಡಿಕೊಂಡು ತನ್ನ ಕೊಬ್ಬರಿ ತುಂಬಿಕೊಂಡು ಹಳ್ಳಿಯಿಂದ ಖರೀದಿ ಕೇಂದ್ರಕ್ಕೆ ಬರುವ ರೈತರು ತನ್ನ ಸರದಿಗಾಗಿ ಕಾದು ಕಾದು ಸುಸ್ತಾಗಿ, ಕಡೆಗೆ ನಾಫೆಡ್ ಕೇಂದ್ರದೊಳಕ್ಕೆ ತನ್ನ ಕೊಬ್ಬರಿ ಮಾರಾಟ ಆಗಿ ಹೋದರೆ ಸಾಕು ಎಂಬ ನಿಸ್ಸಹಾಯಕತೆಯ ಸ್ಥಿತಿಗೆ ಬಂದಿದ್ದಾರೆ. ಆಗ ಖರೀದಿ ಅಧಿಕಾರಿ ಮತ್ತು ಹಮಾಲರು ಒಪ್ಪಿಸುವ ಎಲ್ಲ ಮಾತುಗಳನ್ನು ರೈತರು ಅಸಹಾಯಕರಾಗಿ ಒಪ್ಪಿ ಕೊಬ್ಬರಿ ಮಾರಾಟ ಮಾಡಿ ಮರುಪ್ರಶ್ನಿಸದೆ ಹೋಗುತ್ತಾರೆ. ಇದು ರೈತರನ್ನು ಭ್ರಷ್ಟಾಚಾರ ಮತ್ತು ಲೂಟಿಕೋರ ದಂಧೆಯ ವಿಷವರ್ತುಲದಲ್ಲಿ ಬಲವಂತವಾಗಿ ಸಿಗಿಸಿ ನಿರಂತರವಾಗಿ ಶೋಷಿಸಲಾಗುತ್ತಿದೆ. ಇದರಲ್ಲಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಕೈವಾಡವಿದೆ” ಎಂದು ಆರೋಪಿಸಿದರು.
“ಅಧಿಕಾರಿಗಳು, ಹಮಾಲರು ಮತ್ತು ರೈತರ ವೇಷದಲ್ಲಿ ಬರುವ ಕೆಲಮಂದಿ ವರ್ತಕರು, ಎಲ್ಲರೂ ಸೇರಿ ತೆಂಗು ಬೆಳೆಗಾರನನ್ನು ದಮನಿಸುತ್ತಿದ್ದಾರೆ. ರಾಜಕೀಯ ಮುಖಂಡರುಗಳ ಬಹಳಷ್ಟು ಹಿಂಬಾಲಕರೇ ಖರೀದಿ ಕೇಂದ್ರಗಳನ್ನು ನಿಯಂತ್ರಿಸುತ್ತಿರುವಂತೆ ಕಾಣುತ್ತಿದೆ” ಎಂದರು.
“ಕಲ್ಪತರು ನಾಡಿನ ಕೊಬ್ಬರಿಗೆ ಈ ಭಾಗದ ಕೊಬ್ಬರಿಯೇ ಸಾಟಿ. ಇಲ್ಲಿನ ಕೊಬ್ಬರಿಯಲ್ಲಿರುವ ಅತ್ಯುತ್ತಮವಾದ ಗುಣಮಟ್ಟ ಬೇರೆ ಇನ್ನ್ಯಾವ ಪ್ರದೇಶದ ಕೊಬ್ಬರಿಯಲ್ಲೂ ಸಿಗದು. ಹಾಗಾಗಿ ಇಲ್ಲಿನ ರೈತರನ್ನು, ತೆಂಗು ಬೆಳೆಗಾರರನ್ನು ಶೋಷಿಸಿ ಭ್ರಷ್ಟವ್ಯವಸ್ಥೆಗೆ ಅವರ ಕುಣಿಕೆ ಹಾಕಿಕೊಳ್ಳಲು ಖರೀದಿ ಕೇಂದ್ರಗಳಲ್ಲಿ ಅನಧಿಕೃತವಾದ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ಚಾಲ್ತಿಯಲ್ಲಿವೆ. ಇದನ್ನು ಮೊದಲು ತಡೆಗಟ್ಟಬೇಕು. ರೈತ ಮತ್ತೆ ತನ್ನ ಸ್ವಾಭಿಮಾನಕ್ಕಾಗಿ ಸಂಘಟಿತಗೊಳ್ಳಬೇಕು. ಕಲ್ಪತರು ಕೊಬ್ಬರಿಯ ಹಿರಿಮೆ ಭ್ರಷ್ಟರ ಪಾಲಾಗದಂತೆ ಕಾಪಾಡಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾಂಗ್ರೆಸ್ ಸೋಲಿನ ಪರಾಮರ್ಶೆ; ಚಿಂತನ ಮಂಥನ ಸಭೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ವೆಂಕಟೇಶ್ ರಾಮಕೃಷ್ಣ ಮಾತನಾಡಿ, “ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಇರುವ ನಾಲ್ಕೂ ಖರೀದಿ ಕೇಂದ್ರಗಳಲ್ಲಿ ಜೂನ್ 8ರ ಸಂಜೆಯ ಹೊತ್ತಿಗೆ ಸಿಕ್ಕ ಈವರೆಗಿನ ಒಟ್ಟು ಮಾಹಿತಿಯ ಪ್ರಕಾರ, ನೊಂದಣಿಯಾದ ಒಟ್ಟು ಕೊಬ್ಬರಿ ಉತ್ಪಾದಕ ರೈತರು 4,113 ಮಂದಿ. ಈವರೆಗೆ ಖರೀದಿ ಕೇಂದ್ರಕ್ಕೆ ಕೊಬ್ಬರಿ ಮಾರಿರುವ ರೈತರು 3,848 ಮಂದಿ. ನೊಂದಣಿಯಾದ ಕೊಬ್ಬರಿ 48,568.50 ಕ್ವಿಂಟಾಲ್’ಗಳಷ್ಟು. ಈವರೆಗೆ ಖರೀದಿಯಾಗಿರುವ ಒಟ್ಟು ಕೊಬ್ಬರಿ 45,436.45 ಕ್ವಿಂಟಾಲ್’ಗಳಷ್ಟು. ತಾಲೂಕಿನ ಖರೀದಿ ಕೇಂದ್ರಗಳಲ್ಲಿ ಶೇ.94ರಷ್ಟು ಖರೀದಿ ಪ್ರಕ್ರಿಯೆ ನಡೆದಿದೆ” ಎಂದರು.
ವರದಿ: ನಾಸೆರ್ ಸೈಯ್ಯದ್ ಹುಸೇನ್, ಸಂಚಲನ
