ಭೂಮಿ ಮತ್ತು ವಸತಿ ಹಕ್ಕು ವಂಚಿತರ ವಿಚಾರಗಳನ್ನು ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯಿಸುತ್ತಿದ್ದಾರೆ. ವಂಚಿತರನ್ನು ಪದೇ ಪದೇ ಅಲೆಸುತ್ತಾರೆ ಎಂದು ಜಿಲ್ಲಾ ಸಂಚಾಲಕ ನಾಗಭೂಷಣ್ ಹಂದ್ರಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ವಂಚಿತರಿಗೆ ಭೂಮಿ ಮತ್ತು ವಸತಿ ನೀಡಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಹಂದ್ರಾಳ್, “ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಚ್.ಎಸ್ ದೊರೆಸ್ವಾಮಿಯವರ ನೇತೃತ್ವದ ಹೋರಾಟಕ್ಕೆ ಮಣಿದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಸ್ಯೆಗಳನ್ನು ಬಗೆಹರಿಸಲು ಹೈಲೆವೆಲ್ ಸಮಿತಿ ರಚಿಸಿತ್ತು. ಹಿರಿಯ ಐಎಎಸ್ ಅಧಿಕಾರಿಗಳು, ಕಾರ್ಯದರ್ಶಿಗಳು, ಹೋರಾಟಗಾರರು ಆ ಸಮಿತಿಯಲ್ಲಿದ್ದರು. ಅಗ ಬಡವರಿಗೆ ಒಂದಷ್ಟು ಅನುಕೂಲಗಳು ಆಗಿದ್ದವು. ಈಗ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹಿಂದೆ ರಚಿಸಿದ್ದಮತ್ತೆ ಹೈಲೆವೆಲ್ ಕಮಿಟಿಗೆ ಮತ್ತೆ ಬಲ ತುಂಬಬೇಕು” ಎಂದು ಆಗ್ರಹಿಸಿದರು.
“ತುಮಕೂರು ಜಿಲ್ಲೆಯಲ್ಲಿ ಭೂಮಿ ಮತ್ತು ವಸತಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಧರಣಿಗಳನ್ನು ಮಾಡಲಾಗಿತ್ತು. ಆಗ ಇದ್ದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ಈಗ ಇರುವ ಅಧಿಕಾರಿಗಳು ಬಡವರನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
ಹಿರಿಯ ಹೋರಾಟಗಾರರಾದ ಸಿ ಯತಿರಾಜ್ ಮಾತನಾಡಿ, “ಬಂಡವಾಳಶಾಹಿಗಳಿಗೆ ಭೂಬ್ಯಾಂಕ್ ಮಾಡುವ ಸರ್ಕಾರ. ಬಡವರನ್ನು ಬೀದಿಯಲ್ಲಿ ಕೂರಿಸುತ್ತದೆ. ಕಾಳಜಿಯೇ ಇಲ್ಲದ ಸರ್ಕಾರಗಳು ಬಡವರನ್ನು ಶೋಷಣೆ ಮಾಡುತ್ತಿವೆ. ಈ ಸಮಸ್ಯೆಗಳಿಗೆ ಒಂದು ಐಕ್ಯ, ವಿಶಾಲ ತಳಹದಿಯ ಹೋರಾಟದ ಅವಶ್ಯಕತೆ ಇದೆ” ಎಂದರು.
ಪ್ರತಿಭಟನೆಯಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಮಿತಿಯ ಕುಮಾರ ಸಮತಳ, ಡಿಎಸ್‌ಎಸ್ ವೆಂಕಟೇಶ್, ಮರಿಯಪ್ಪ, ಮಲ್ಲಿಕಾರ್ಜುನಯ್ಯ, ಮಾಚೇನಹಳ್ಳಿ ಮುನಿರಾಜ್, ನಟರಾಜ್ ,ಮಂಜುನಾಥ, ರಫೀಕ್ ಪಾಷಾ, ಜಬೀನಾ ತಾಜ್, ಪವಿತ್ರ, ಬೀದಿ ಬದಿ ವ್ಯಾಪಾರಿಗಳ ಸಂಘದ ಭದ್ರೇಗೌಡ, ಮಂಜುನಾಥ ಹೈಕೋರ್ಟ್ ವಕೀಲ ಉಮಾಪತಿ ಸಿ, ಸುಧಾ ಕಟ್ವ, ವಕೀಲ ಮಾರನಹಳ್ಳಿ ಗಣೇಶ್, ಶಿವಕುಮಾರ್ ಮೇಸ್ಟ್ರುಮನೆ, ಪದ್ಮನಾಭ, ರಂಗಧಾಮ್ಯ, ಶೇಖರ್,ಚಿನ್ಮಯ್, ಮೋಹನ್, ಶಿವಕುಮಾರ್, ಅನಿಲ್ ಕುಮಾರ್ ಚಿಕ್ಕದಾಳವಟ್ಟ ಇದ್ದರು.