ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಬಾಣಸಂದ್ರ ರಸ್ತೆಯ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜುಲೈ 26ರಂದು ವಿವಿಧ ಸಂಘ ಸಂಸ್ಥೆಗಳಿಂದ ‘ಭಾರತದ ಸಂವಿಧಾನ ಬದಲಾವಣೆ ಅಗತ್ಯವೇ?’ ವಿಷಯದ ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಲು ಸಿದ್ದತೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಿದರೂ ತುರುವೇಕೆರೆ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತಿದ್ದಾರೆ ಎಂದು ಆರೋಪಿಸಿ ಡಿಎಸ್‌ಎಸ್ ಮುಖಂಡರು ತುರುವೇಕೆರೆ ಪೊಲೀಸ್ ಠಾಣೆ ಮುಂದೆ ದಿಢೀರ್ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದರು.
“ತುರುವೇಕೆರೆ ತಾಲೂಕಿನ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸುರಭಿ ಸಂಗಮ ಸಂಸ್ಥೆ ಸಹಯೋಗದಲ್ಲಿ ಈ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಆಯೋಜನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಹಾಗಾಗಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಿದರರೂ ಕೂಡಾ ಪೊಲೀಸರು ಎಫ್‌ಐಆರ್ ದಾಖಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಮನುವಾದಿಗಳ ರಕ್ಷಣೆಗೆ ನಿಂತಿರುವುದು ಖಂಡನೀಯ” ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪರಿಸರದೊಂದಿಗಿನ ಸ್ನೇಹ ಎಂಥವರನ್ನೂ ಪುಳಕಿತಗೊಳಿಸುತ್ತದೆ: ಸಾಲುಮರದ ತಿಮ್ಮಕ್ಕ
“ತುರುವೇಕೆರೆ ಪೊಲೀಸ್ ಠಾಣೆ ಎದುರು ಅಂಬೇಡ್ಕರ್ ಪೋಟೋವಿಟ್ಟು ಡಿಎಸ್‌ಎಸ್, ಛಲವಾದಿ ಮಹಾಸಭಾ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ದೂರು ನೀಡಿದರೂ ಕ್ರಮ ಕೈಗೊಳ್ಳಲು ವಿಳಂಬಧೋರಣೆ ತೋರಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ದಾಖಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ಪ್ರತಿಭಟನಕಾರರು ಹೇಳಿದರು.
“ಸಂವಿಧಾನ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರ ಒಳಿತಿಗೆ ಹಕ್ಕು ಬಾಧ್ಯತೆಗಳನ್ನು ನೀಡಿದೆ. ಕೆಲವರು ಸಂವಿಧಾನ ಬದಲಾವಣೆ ವಿಚಾರವನ್ನು ಮಕ್ಕಳ ಮನಸ್ಸಿಗೆ ತುರುಕಲು ಹೊರಟಿರುವುದು ಸರಿಯಲ್ಲ” ಎಂದು ಹೋರಾಟಗಾರ ಜಗದೀಶ್ ಹೇಳಿದರು.
