ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್(ಜೆಜೆಎಂ) ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ದಿನಾಂಕ ನಿಗಧಿಗೊಳಿಸಲು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024-25ನೇ ಸಾಲಿನ ತ್ರೖಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜೆಜೆಎಂ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಿ ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದ ಅವರು, ಮನೆ-ಮನೆಗೆ ಕುಡಿಯುವ ನೀರೊದಗಿಸಲು ಕಳೆದ 2021 ರಿಂದ ಈವರೆಗೂ ಜಿಲ್ಲೆಯಲ್ಲಿ 4 ಹಂತಗಳಲ್ಲಿ ಜೆಜೆಎಂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅನುಮೋದಿತ ಒಟ್ಟು 3699 ಜೆಜೆಎಂ ಕಾಮಗಾರಿಗಳ ಪೈಕಿ 1449 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಯೋಜನೆ ಕೈಗೆತ್ತಿಕೊಂಡು 4 ವರ್ಷಗಳು ಕಳೆದರೂ ಇನ್ನೂ ಪ್ರಗತಿಯಲ್ಲಿಯೇ ಇದೆ ಎಂದು ವರದಿಯಲ್ಲಿ ನೀಡಲಾಗಿದೆ. ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ. ಟೆಂಡರ್ ಕರೆದಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಜೆಜೆಎಂ ಯೋಜನೆಯಡಿ ಟೆಂಡರ್ ಕರೆದಿರುವ 3699 ಕಾಮಗಾರಿಗಳ ಪೈಕಿ 48 ಕಾಮಗಾರಿಗಳನ್ನು ರದ್ದುಪಡಿಸಲಾಗಿದೆ. ಕಾಮಗಾರಿಗಳನ್ನು ರದ್ದುಪಡಿಸಲು ಕಾರಣವೇನು? ಮರು ಟೆಂಡರ್ ಕರೆಯಲು ಕ್ರಮ ಕೈಗೊಂಡಿಲ್ಲ. ಕೆಲವು ಗುತ್ತಿಗೆದಾರರಿಗೆ ಈವರೆಗೂ ಕಾರ್ಯಾದೇಶ ನೀಡಿಲ್ಲ. ಕಾರಣವೇನೆಂದು ಪ್ರಶ್ನಿಸಿದ ಅವರು ಆಡಳಿತ ವ್ಯವಸ್ಥೆಯ ನ್ಯೂನ್ಯತೆಗಳನ್ನು ಸರಿಪಡಿಸಲು ವಿಪಕ್ಷದವರು ನೀಡುವ ಸಲಹೆಗಳನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು , ನಿಗಧಿತ ಅವಧಿಯೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತಿದೆ. ದಂಡಕ್ಕೆ ಎದರಿ ಕೆಲವು ಗುತ್ತಿಗೆದಾರರು ಕಾಮಗಾರಿಯ ಕಾರ್ಯಾದೇಶ ಪಡೆಯಲು ಮುಂದಾಗುತ್ತಿಲ್ಲ. ಈವರೆಗೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ 30 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿ ಅಂದಾಜು 2229 ಕೋಟಿ ರೂ.ವೆಚ್ಚದಲ್ಲಿ ಬ್ಯಾಚ್ 1ರಲ್ಲಿ 84, ಬ್ಯಾಚ್ 2ರಲ್ಲಿ 75, ಬ್ಯಾಚ್ 3ರಲ್ಲಿ 1787, ಬ್ಯಾಚ್ 4ರಲ್ಲಿ 1753 ಸೇರಿದಂತೆ ಒಟ್ಟು 3699 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 1372 ಕಾಮಗಾರಿಗಳು ಪ್ರಗತಿಯಲ್ಲಿವೆ. ಜೆಜೆಎಂ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ನಿಗಧಿತ ಅವಧಿಯೊಳಗಾಗಿ ಬಿಲ್ಲಿನ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ನಂತರ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ. ಮಧುಗಿರಿ, ಬಟವಾಡಿ ಹಾಗೂ ಬೆಳಗುಂಬ ರಸ್ತೆಯ ಕೆಳ ಸೇತುವೆಯಲ್ಲಿ ಮಳೆ ನೀರು ನಿಲ್ಲದಂತೆ ಕಳೆದ ಸಭೆಯಲ್ಲಿಯೇ ನಿರ್ದೇಶನ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಬೆಂಗಳೂರಿನಲ್ಲಿ ಮಳೆ ನೀರಿನಿಂದ ಜೀವ ಹಾನಿಗಳಾಗಿವೆ. ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ನಿರ್ಲಕ್ಷ್ಯ ತೋರಿದರೆ ಕೇಂದ್ರ ಸಚಿವರಿಗೆ ದೂರು ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅನೂಪ್ ಅವರಿಗೆ ಸೂಚನೆ ನೀಡಿದರು
ಪರಿಸರಕ್ಕೆ ಹಾನಿಯುಂಟಾಗುವುದರಿಂದ ಜಿಲ್ಲೆಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ(ಮೈನಿಂಗ್) ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಒದಗಿಸಿದರೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಹಿಂದುಳಿದಿದ್ದಾರೆ. ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿದಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಲು ಮುಂದೆ ಬರುತ್ತವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು ಅವರಿಗೆ ಸೂಚನೆ ನೀಡಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ನಿವೇಶನ ಹೊಂದಿರುವ ಮಾಲೀಕರು ಈವರೆಗೂ ಕೈಗಾರಿಕೆಗಳನ್ನು ಸ್ಥಾಪಿಸದಿದ್ದರೆ ನಿವೇಶನ ಹಕ್ಕನ್ನು ರದ್ದುಪಡಿಸಬೇಕೆಂದು ಕೆಐಎಡಿಬಿ ಅಧಿಕಾರಿ ಲಕ್ಷ್ಮೀಷ ಅವರಿಗೆ ಸಚಿವರು ಸೂಚನೆ ನೀಡಿದರು.
ಕೈಗಾರಿಕಾ ಅಭಿವೃದ್ಧಿಗಾಗಿ ವಸಂತ ನರಸಾಪುರದಲ್ಲಿ ಪ್ರಸ್ತಾಪಿತ 1696 ಎಕರೆ ಭೂಮಿ ಪೈಕಿ ಈವರೆಗೂ 7565 ಎಕರೆ ಪ್ರದೇಶವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿಯೂ ಸಹ ಕುಂಠಿತವಾಗಿದೆ. ಈವರೆಗೂ 18 ಎಕರೆ ಪ್ರದೇಶದ ಮಾಲೀಕರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಯ ಕೈಗಾರಿಕ ಅಭಿವೃದ್ಧಿ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಅಧಿಕಾರಿಗಳು ಕಡ್ಡಾಯವಾಗಿ ದಿನಚರಿ ನಿರ್ವಹಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳಡಿ ಶಕ್ತಿ ಯೋಜನೆ ಹೊರತುಪಡಿಸಿ ಜಿಲ್ಲೆಯ 19,71,047 ಫಲಾನುಭವಿಗಳಿಗೆ 3523 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 14.2 ಕೋಟಿ ಸುತ್ತುವಳಿಗೆ 431 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಶಾಸಕ ಸುರೇಶ್ ಗೌಡ ಮಾತನಾಡಿ, ಬಡವರಿಗೆ ಮಾತ್ರ ಉಚಿತ ಗ್ಯಾರಂಟಿ ಯೋಜನೆಗಳ ಸೌಲಭ್ಯ ಒದಗಿಸಬೇಕು. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರಲ್ಲದೆ, ತುಮಕೂರು ಗ್ರಾಮಾಂತರ ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಬಾಬು, ಡಾ. ಹೆಚ್.ಡಿ. ರಂಗನಾಥ್, ಎಸ್.ಆರ್. ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಸೇರಿದಂತೆ ಜಿಲ್ಲಾ ಹಾಗೂ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಹೊರತಂದಿರುವ ರೈತರಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. ಇದಕ್ಕೂ ಮುನ್ನ ಜಿಲ್ಲಾ ಪಂಚಾಯತಿ ಕಚೇರಿಯ ನವೀಕೃತ ಸಭಾಂಗಣವನ್ನು ಉದ್ಘಾಟಿಸಲಾಯಿತು.