ಕನ್ನಡ ಭಾಷೆಗೆ ಒಳಗೊಳ್ಳುವ ಗುಣ ಇದೆ. ಕನ್ನಡ ಭಾಷೆ ಒಳಗೆ ಉರ್ದು, ಫ್ರೆಂಚ್, ಅರೇಬಿಕ್, ಇಂಗ್ಲೀಷ್ ಪದಗಳನ್ನು ನಮ್ಮದೇ ಎನ್ನುವಷ್ಟು ಅಪ್ಪಿಕೊಂಡಿದ್ದೇವೆ. ಕನ್ನಡ ಎಂದರೆ ಭಿನ್ನ ಭೇದ ಎಣಿಸದ ಸಮಗ್ರ ಕರ್ನಾಟಕವನ್ನು ಒಳಗೊಂಡ ದೃಷ್ಟಿಕೋನ. ಕನ್ನಡ ಧರ್ಮಾತೀತವಾದದ್ದು. ಹಲವು ಭಾಷೆ ಮಾತಾಡುವ, ಬಹು ಧರ್ಮೀಯರನ್ನು ಒಳಗೊಂಡಿದೆ. ಕನ್ನಡ ಭಾಷೆಯನ್ನು ದೈನಂದಿನ ವ್ಯವಹಾರದಲ್ಲಿ ಬಳಸುವ ಎಲ್ಲರೂ ಕನ್ನಡಿಗರು ಎಂದು ತುಮಕೂರು ವಿವಿ ಉಪನ್ಯಾಸಕಿ ಡಾ.ಆಶಾರಾಣಿ ಬಗ್ಗನಡು ತಿಳಿಸಿದರು.
ತುಮಕೂರು ನಗರದ ಕೆಪಿಎಸ್ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ ಕನ್ನಡ ಮಾಧ್ಯಮ ದಲ್ಲಿ ದೊರೆಯುತ್ತಿಲ್ಲ, ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮ ದಲ್ಲಿ ಓದಿದ ಬಹಳಷ್ಟು ಮಕ್ಕಳು, ಉನ್ನತ ಶಿಕ್ಷಣ ಕನ್ನಡ ಮಾಧ್ಯಮ ದಲ್ಲಿ ಲಭ್ಯವಿರದ ಕಾರಣಕ್ಕಾಗಿಯೇ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವುದ ಕಾಣಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ದಲ್ಲಿ ಕನ್ನಡ ಬಳಸಬೇಕು , ಕನ್ನಡದ ಪಠ್ಯಗಳು ಬರಬೇಕು .ಕನ್ನಡವನ್ನು ಜ್ಞಾನದ ಭಾಷೆಯಾಗಿ, ಅನ್ನದ ಭಾಷೆಯಾಗಿ ಮಾಡುವ ಕೆಲಸ ಆಗಬೇಕು .ಕನ್ನಡ ಮಾಧ್ಯಮ ದಲ್ಲಿ ಓದಿದ ಮಕ್ಕಳಿಗೆ ಒಳ್ಳೆಯ ಭವಿಷ್ಯ ಇದೆ ಎಂದರೆ, ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಕ್ಕೆ ಸೇರಿಸುವರು .ಇದನ್ನು ಆಗು ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು ಎಂದರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ , ಕನ್ನಡವನ್ನು ನಮ್ಮ ದೈನಂದಿನ ವ್ಯವಹಾರದಲ್ಲಿ ಬಳಸುವ, ಬೆಳೆಸುವ ಮತ್ತು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ತುಮಕೂರು ನಗರದ ಹಿರಿಯ ನಾಗರೀಕರಾದ ಶ್ರೀ ರಾಜನ್ ರವರು ತಮ್ಮ ಸಹೋದರಿಯರು ವಿದ್ಯಾಭ್ಯಾಸ ಮಾಡಿದ್ದ ಎಂಪ್ರೆಸ್ ಶಾಲೆಯಲ್ಲಿ ಎಸ್ಎಸ್ಎಲ್ ಸಿ ಯಲ್ಲಿ ಕನ್ನಡ ಮಾಧ್ಯಮದಲ್ಲಿ, ಅತಿಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿನಿಗೆ ಮತ್ತು ಯಾವುದೇ ಮಾಧ್ಯಮ ದಲ್ಲಿ ಓದಿ ,ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ,ಒಟ್ಟು ಮೂವರಿಗೆ ತಲಾ ಒಂದು ಸಾವಿರದಂತೆ ,ಮೂರು ಸಾವಿರ ರೂಪಾಯಿಗಳ ಬಹುಮಾನವನ್ನು ಪ್ರಾಯೋಜಿಸಿದ್ದು ಅದನ್ನು ಈ ಕಾರ್ಯಕ್ರಮ ದಲ್ಲಿ ವಿತರಿಸುವುದಾಗಿ ತಿಳಿಸಿದರು.
ಎಂಪ್ರೆಸ್ ಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ ಒಂದು ಸಾವಿರದಂತೆ ,ಮೂರು ಸಾವಿರ ನಗದು ಕೊಟ್ಟು ಪುರಸ್ಕರಿಸಲಾಯಿತು.
ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಮಂಜುಳಾ .ಎನ್ ಮಾತನಾಡಿ , ತಮ್ಮ ಶಾಲೆಯಲ್ಲಿ ಲೇಖಕಿಯರ ಸಂಘದಿಂದ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡದ್ದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಿ.ಎಲ್ .ಸುನಂದಮ್ಮ, ಶಿಕ್ಷಕ ರಾಮಯ್ಯ, ಗೀತಾ ನಾಗೇಶ್ ಮತ್ತು ಶಾಲೆಯ ಭೋಧಕ ವರ್ಗದವರು ಉಪಸ್ಥಿತರಿದ್ದರು.