ಪೊಲೀಸ್ ವಶದಲ್ಲೇ ಮೃತಪಟ್ಟ ಆರೋಪಿ ಕುಮಾರಾಚಾರ್ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಮಾಜಿ ಶಾಸಕ ಮಸಾಲೆ ಜಯರಾಮ್ ನೇತೃತ್ವದಲ್ಲಿ ತುರುವೇಕೆರೆ ಪಟ್ಟಣದ ಸಿಪಿಐ ಕಚೇರಿ ಎದುರು ಧರಣಿ ನಡೆಸಿದರು.
ಅಕ್ಟೋಬರ್ 23ರಂದು ಕೆ. ಮಾವಿನಹಳ್ಳಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಆರೋಪದ ಮೇಲೆ ಕುಮಾರಾಚಾರ್‌ನನ್ನು ಪೊಲೀಸರು ಬಂಧಿಸಿದ್ದರು. ಠಾಣೆಗೆ ಕರೆತರುವ ಮಾರ್ಗಮಧ್ಯೆ ಕುಮಾರಾಚಾರ್ ಮೃತಪಟ್ಟಿದ್ದಾಗಿ ಪೋಲೀಸರು ಆತನ ಪತ್ನಿ ಹಾಗೂ ಸಂಬಂಧಿಕರಿಗೆ ತಿಳಿಸಿದ್ದರು. ಕುಮಾರಾಚಾರ್ ಸಾವು ಕುರಿತಂತೆ ಪತ್ನಿ, ಪುತ್ರ ಹಾಗೂ ಸಂಬಂಧಿಕರು ಶಂಕೆ ವ್ಯಕ್ತಪಡಿಸಿ ನ್ಯಾಯ ದೊರಕಿಸುವಂತೆ ಮಾಜಿ ಶಾಸಕ ಮಸಾಲೆ ಜಯರಾಮ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಕುಮಾರಾಚಾರ್‌ನನ್ನು ಪೋಲೀಸರು ಹತ್ಯೆಗೈದಿದ್ದಾರೆಂದು ಆರೋಪಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಮಾಜಿ ಶಾಸಕ ಮಸಾಲೆ ಜಯರಾಮ್ ನಾಗರಿಕರೊಂದಿಗೆ ಒಗ್ಗೂಡಿ ಸಿಪಿಐ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪೊಲೀಸರ ಅಮಾನತಿಗೆ ಒತ್ತಾಯ
“ಪೊಲೀಸರು ಹಲ್ಲೆ ನಡೆಸಿದ್ದರಿಂದ ಕುಮಾರಾಚಾರ್ ಸಾವು ಸಂಭವಿಸಿದೆ. ಕುಮಾರಾಚಾರ್ ಸಾವಿನಿಂದ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಕುಮಾರಾಚಾರ್ ಸಾವಿಗೆ ಕಾರಣರಾಗಿರುವ ಪಿಎಸ್‌ಐ ಗಣೇಶ್ ಮತ್ತು ಆತನ ಜೊತೆಯಲ್ಲಿದ್ದ ಸಿಬ್ಬಂದ್ದಿಯನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು. ಕುಮಾರಾಚಾರ್ ಕುಟುಂಬಕ್ಕೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು” ಎಂದು ಮಾಜಿ ಶಾಸಕ ಮಸಾಲೆ ಜಯರಾಮ್ ಆಗ್ರಹಿಸಿದರು.
“ಮೇಲಧಿಕಾರಿಗಳು ಶೀಘ್ರದಲ್ಲಿಯೇ ಅಗತ್ಯ ಕ್ರಮ ವಹಿಸದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ” ಎಂದು ಎಚ್ಚರಿಸಿದರು.
ಫಲಿಸದ ಮಾತುಕತೆ
ಪ್ರತಿಭಟನೆ ನಿರತ ಮಾಜಿ ಶಾಸಕ ಮಸಾಲೆ ಜಯರಾಮ್ ಅವರೊಂದಿಗೆ ಡಿವೈಎಸ್‌ಪಿ ಲಕ್ಷ್ಮೀಕಾಂತ್, ಸಿಪಿಐ ಲೋಹಿತ್ ಅವರು ಮಾತುಕತೆ ನೆಡೆಸಿದರು. ಕುಮಾರಾಚಾರ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವ ಕುರಿತು ತಿಳಿಸಿದ್ದಾರೆ. ಆದರೂ ಎಸ್‌ಪಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕುಮಾರಾಚಾರ್ ಸಾವಿಗೆ ಕಾರಣರಾಗಿರುವ ಎಸ್‌ಐ ಗಣೇಶ್ ಮತ್ತಿತರನ್ನು ಅಮಾನತುಗೊಳಿಸಿ, ಅಗತ್ಯ ಪರಿಹಾರ ಘೊಷಣೆ ಮಾಡುವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆಂದು ಮಾಜಿ ಶಾಸಕ ಮಸಾಲೆ ಜಯರಾಮ್ ಹಾಗೂ ಅವರ ಬೆಂಬಲಿಗರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಸಮಾನತೆ ವಿರುದ್ಧ ಜನ ಧಂಗೆ ಏಳುವ ಸಾಧ್ಯತೆಯಿದೆ: ಸಚಿವ ಕೆ ಎನ್ ರಾಜಣ್ಣ
ಧರಣಿಯಲ್ಲಿ ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ವಿ ಟಿ ವೆಂಕಟರಾಮ್, ಸಿದ್ದಲಿಂಗಪ್ಪ, ನವೀನಬಾಬು, ನಂಜೇಗೌಡ ಗಣೇಶ್‌ಗೌಡ, ಸೋಮಣ್ಣ, ಚಿದಾನಂದ್, ಪ್ರಕಾಶ್, ದಯಾನಂದ್, ಚೂಡಾಮಣಿ, ವಿಶ್ವಕರ್ಮ ಸಮಾಜದ ದೇವರಾಜ್, ಪ್ರೇಮಕುಮಾರ್, ಕುಮಾರಾಚಾರ್ ಪತ್ನಿ ಹಾಗೂ ಕುಟುಂಬದವರು ಸೇರಿದಂತೆ ಇತರರು ಇದ್ದರು.