ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ಸಂಪರ್ಕಿಸುವ ಕಾಮಗಾರಿ 2025ರಲ್ಲೆ ಮುಗಿಯಬೇಕಿತ್ತು. ಆದರೆ ಜಿಲ್ಲೆಯಲ್ಲಿ ಅನುಷ್ಠಾನ ವಿಳಂಬವಾಗಿದ್ದು ಪ್ರಗತಿಯಲ್ಲಿರುವ 1459 ಕಾಮಗಾರಿಗಳನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಾಕೀತು ಮಾಡಿದರು.
ತುಮಕೂರು ಜಿಲ್ಲಾ ಪಂಚಾಯಿತಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯೋಜನೆಯಡಿ 4 ಬ್ಯಾಚ್‌ನಲ್ಲಿ 3699 ಕಾಮಗಾರಿ ಕೈಗೆತ್ತಿಕೊಂಡಿದ್ದು, 1644 ಕಾಮಗಾರಿ ಪೂರ್ಣಗೊಂಡಿದೆ. 953 ಕಾಮಗಾರಿಗಳು ಒಂದು ವರ್ಷಕ್ಕೂ ಮೇಲ್ಪಟ್ಟು ಅವಧಿಯಿಂದ ವಿಳಂಬವಾಗಿ ನಡೆಯತ್ತಿದ್ದು 6 ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾದ ಕಾಮಗಾರಿಗಳನ್ನು ವರ್ಷಕ್ಕೂ ಅಧಿಕ ಸಮಯದಿಂದ ಬಾಕಿ ಉಳಿಸಿಕೊಳ್ಳಲಾಗಿದೆ. 375 ಕಾಮಗಾರಿ ಇನ್ನೂ ಪ್ರಾರಂಭವೇ ಆಗಿಲ್ಲ. ಈ ವಿಳಂಬ ಮಾಡುತ್ತಿರುವುದು ಏಕೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಹಾಗೂ ಎಇಇಗಳ ನಡುವೆ ಸಮನ್ವಯತೆ ಕೊರತೆ ಇರುವುದು ಎದ್ದು ಕಾಣುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ಕೂಡಲೇ ಚಾಲ್ತಿಯಲ್ಲಿರುವ ಕಾಮಗಾರಿ ಪೂರ್ಣಗೊಳಿಸುವ ಜೊತೆಗೆ ಆಯಾ ಶಾಸಕರ ಮೂಲಕ ಬಾಕಿ ಕಾಮಗಾರಿಗೆ ಕೂಡಲೇ ಚಾಲನೆ ಕೊಡಿಸಬೇಕು ಎಂದರು.

ಬ್ಯಾಚ್ 3 ರಲ್ಲಿ ಕೈಗೊಂಡ 54 ಕಾಮಗಾರಿಗಳಲ್ಲಿ ಕೆಲಸವೇ ಆಗದೆ ಶೇ.93% ಹಣವನ್ನು ನಾಲ್ವರು ಗುತ್ತಿಗೆದಾರರು ಡ್ರಾ ಮಾಡಿದ್ದಾರೆ. ನಿವೃತ್ತರಾದ ಹಿಂದಿನ ಎಕ್ಸಿಕ್ಯೂಟಿವ್ ಎಂಜನಿಯರ್ ಎಂಬ ಮಾಹಿತಿ ಅರಿತು ಹೌಹಾರಿದ ಸಚಿವರು, ಸಂಬಂಧಪಟ್ಟವರ ಮೇಲೆ ಕ್ರಮ ಏಕೆ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸಿಇಓ ಜಿ.ಪ್ರಭು ಅವರು ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಬಿಲ್ ಪಾವತಿಗ ಒತ್ತಡ ಹಾಕಲಾಗುತ್ತಿದೆ. ತಪ್ಪಿತಸ್ಥರ ಮೇಲೆ ಕ್ರಮಕ್ಕೂ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಎಕ್ಸಿಕ್ಯೂಟಿವ್ ಎಂಜಿನಿಯರ್ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಈ ಹಂತದಲ್ಲಿ ಸಚಿವರು ಹೀಗೆ ಮುಂದುವರಿದಲ್ಲಿ ಸಿಇಓಯಿಂದ ವರದಿ ಪಡೆದು ಅಮಾನತ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ, ಷಡಾಕ್ಷರಿ ಧ್ವನಿಗೂಡಿಸಿ ರದ್ದಾದ ಕಾಮಗಾರಿಗಳನ್ನು ಶೀಘ್ರ ಪುನರಾರಂಭಿಸಬೇಕೆಂದು ಒತ್ತಾಯಿಸಿದರು.
ಇನ್ನೂ ಯೋಜನೆಗೆ 2229.46 ಕೋಟಿ ವೆಚ್ಚಕ್ಕೆ ಅನುಮೋದಿಸಿದ್ದು, ಈವರೆಗೆ 585 ಕೋಟಿ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದೆ. ಬಿಲ್ ಪಾವತಿ ವಿಳಂಬವೂ ಕಾಮಗಾರಿ ಹಿನ್ನಡೆಗೆ ಕಾರಣವಾಗಿದೆಯೆಂದು ಶಾಸಕರು ಸಚಿವರ ಗಮನಸೆಳೆದರು. ಸಚಿವ ಪರಮೇಶ್ವರ್ ಅವರು ಜೆಜೆಎಂ ಕೇಂದ್ರದ ಶೇ. 55 ರಷ್ಟು ಹಾಗೂ ರಾಜ್ಯದ ಶೇ 45 ರಷ್ಟು ಅನುದಾನ ಭರಿಸುವ ಯೋಜನೆಯಾಗಿದ್ದು, ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ಬಾಕಿ ಉಳಿಸಿಕೊಂಡಿಲ್ಲ. ಕೇಂದ್ರದಿಂದಲೇ ಸಂಪುಟ ಅನುಮೋದನೆಯೊಂದಿಗೆ ಅನುದಾನ ಬಿಡುಗಡೆಯಾಗಬೇಕಿದ್ದು, ಈ ಸಂಬಂಧ ಇಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಬಾಕಿ ಅನುದಾನ ಬಿಡುಗಡೆಗೆ ಕೋರೋಣ ಹಾಗೆಯೇ ಸಿಎಂ ಜೊತೆಗೆ ಬಾಕಿ ಪಾವತಿ ಸಂಬಂಧ ನಾನು ಚರ್ಚಿಸುತ್ತೇನೆ ಎಂದರು. ಕೇಂದ್ರ ಸಚಿವ ವಿ.ಸೋಮಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿಬಿಜೆ ಅವರು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಶಾಸಕ ಸುರೇಶ್‌ಗೌಡ ಒತ್ತಾಯಿಸಿದರು.
ತಮ್ಮ ನಿವಾಸವಿರುವ ಹೆಗ್ಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕ ಕಸವಿಲೇವಾರಿ ಆಗುತ್ತಿಲ್ಲವೆಂದು ಖುದ್ದು ಸಚಿವರೇ ತಾಪಂ ಇಒ ಅವರನ್ನು ಪ್ರಶ್ನಿಸಿದ ವೇಳೆ ಪಂಚಾಯಿತಿ ಪಿಡಿಒ ವಿರುದ್ಧ ಶಾಸಕ ಸುರೇಶ್‌ಗೌಡ ತೀವ್ರ ಆಕ್ರೋಶ ಹೊರಹಾಕಿದರು. ಹೆಗ್ಗೆರೆ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದರೂ ಆತನ ಮೇಲೆ ಕ್ರಮವಾಗಿಲ್ಲ ಎಂದರು. ಕೂಡಲೇ ಸಚಿವರು ಸಂಬಂಧಪಟ್ಟ ಪಿಡಿಒ ಮೇಲೆ ಕಾನೂನು ಕ್ರಮ ಜರುಗಿಸಲು ಇಒ ಹಾಗೂ ಸಿಇಒಗೆ ತಾಕೀತುಮಾಡಿದರು.

ಶಿರಾದ ಕಳ್ಳಂಬೆಳ್ಳ, ತಾವರೆಕೆರೆ, ಯಲಿಯೂರು ಏತನೀರಾವರಿ ಯೋಜನೆ ಕಾಮಗಾರಿ ಕೈಗೊಂಡರೂ ಈವರೆಗೂ ಯೋಜನೆಯಡಿ ನೀರುಬಂದಿಲ್ಲ ಎಂದು ಶಾಸಕ ಟಿಬಿಜೆ ಸಚಿವರ ಗಮನಕ್ಕೆ ತಂದರು. ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ಯೋಜನೆ ಚಾಲೂಗೊಳ್ಳುವಂತೆ ಕ್ರಮವಹಿಸಿ ಎಂದು ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ಅವರಿಗೆ ಸಚಿವರು ಸೂಚಿಸಿದರು.
ಶಾಸಕ ಜಿ,ಬಿ.ಜ್ಯೋತಿಗಣೇಶ್ ಮಾತನಾಡಿ ತುಮಕೂರು ನಗರದ ಕುಡಿಯುವ ನೀರು, ಯುಜಿಡಿ ವ್ಯವಸ್ಥೆ ಸಮರ್ಪಕಕ್ಕೆ 500 ಕೋಟಿ ವಿಶೇಷಾನುದಾನ ಅಗತ್ಯವಿದೆ ಎಂದರು. ಈ ವೇಳೆ ನಗರ ನೀರಿನ ಕೊರತೆಯನ್ನು ನೀಗಿಸಲು ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆ ಮಾಡಲಾಗುತ್ತಿದೆ ಎಂದು ಪಾಲಿಕೆ ಉಪಆಯುಕ್ತರು ತಿಳಿಸಿದಾಗ ಶಾಸಕ ಸುರೇಶ್‌ಗೌಡ ಆಕ್ಷೇಪಿಸಿದರು. ಮೈದಾಳದಿಂದ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ದ ಯೋಜನೆಯೇ ಇನ್ನೂ ಪೂರ್ಣಗೊಂಡಿಲ್ಲ. ಮತ್ತೊಂದು ಯೋಜನೆ ಒಂದೇ ಕೆರೆಗೆ ಅನಗತ್ಯ, ಬೇರೆ ಜಲಸಂಗ್ರಹಗಾರಕ್ಕೆ ಹೇಮೆ ಹರಿಸಿ ನಗರಕ್ಕೆ ನೀರು ಕೊಡಿಯೆಂದರು. ಗೂಳೂರು ಕೆರೆ ವಿಶಾಲವಾಗಿದ್ದು ಅಲ್ಲಿಗೆ ನೀರು ಹರಿಸಬಹುದಾ ಪರಾಮರ್ಶಿಸಿ ಎಂದು ಸಲಹೆ ನೀಡಿದರು.
ಶಾಸಕ ಜ್ಯೋತಿಗಣೇಶ್ ಅಮಾನಿಕೆರೆ, ಮರಳೂರು ಕೆರೆಗೂ ತ್ಯಾಜ್ಯ ಹರಿಯುತ್ತಿದ್ದು, ಹೆಬ್ಬಾಕ ಕೆರೆಯಲ್ಲೂ ನೀರು ನಿಲ್ಲುತ್ತಿಲ್ಲ. ಗಂಗಸಂದ್ರ ಕೆರೆಗೆ ಹರಿಸಬಹುದು ಎಂದರು.ಕಡೆಗೆ ಸಚಿವರು ತುಮಕೂರು ನಗರಕ್ಕೆ ಸಂಬಂಧಿಸಿದಂತೆಯೇ ಪ್ರತ್ಯೇಕ ಸಭೆ ಮಾಡೋಣ ಎಂದರು. ವಿವಿಧ ಅನುದಾನಗಳನ್ನು ಸಮೀಕರಿಸಿ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಕಾಮಗಾರಿಗಳನ್ನು ಕೈಗೊಂಡಿರುವ ಕುರಿತು ಸಿಇಓ ಅಂಕಿ-ಅಂಶ ಸಹಿತ ಸಭೆಯ ಗಮನಕ್ಕೆ ತಂದರು. ಸಚಿವರು, ಶಾಸಕರು ಮೆಚ್ಚುಗೆ ಸೂಚಿಸಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಎಸ್ಪಿ ಕೆ.ವಿ.ಅಶೋಕ್, ಆಯಕ್ತೆ ಬಿ.ವಿ.ಅಶ್ವಿಜ, ಉಪ ಆಯುಕ್ತ ಸಂದೀಪ್, ಜಿಪಂ ಉಪಕಾರ್ಯದರ್ಶಿ ಈಶ್ವರಯ್ಯ, ಸಂಜೀವಪ್ಪ ಸೇರಿ ಇಓಗಳು, ಎಇಇಗಳು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಕರೆಯುವ ಕುಡಿಯುವ ನೀರು, ಎಸ್‌ಡಿಆರ್‌ಎಫ್ ಪರಿಹಾರ ಮೊದಲಾದ ಸಭೆಗಳಿಗೆ ಇಒಗಳು ಗೈರಾಗುತ್ತಿದ್ದಾರೆ ಎಂದು ಡಿಸಿ ಶುಭಕಲ್ಯಾಣ್ ಸಚಿವ ಪರಮೇಶ್ವರ್ ಗಮನಕ್ಕೆ ತಂದರು.

ಶಾಸಕರುಗಳು ಸಹ ಇಒಗಳ ನಡೆಗೆ ಆಕ್ಷೇಪಿಸಿದರು. ತುಮಕೂರು ತಾಪಂ ಇಒ ಅವರನ್ನು ಖುದ್ದು ಸಚಿವರೇ ನೀವು ಎಷ್ಟು ಬಾರಿ ನನ್ನನ್ನು ಭೇಟಿಯಾಗಿದ್ದೀರಾ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಸಚಿವರು ಸಿಇಒ ಅವರನ್ನು ಕುರಿತು ಏಕೆ ಹೀಗೆ ಎಂದು ಪ್ರಶ್ನಿಸಿದರು. ಸಿಇಓ ಪ್ರಭು ಅವರು ಇಒಗಳ ಗೈರಾದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಯಾರಿಗೂ ಹೋಗಬೇಡಿಯೆಂದು ಸೂಚನೆ ನೀಡಿಲ್ಲ ಎಂದು ಸ್ಪಷ್ಟೀಕರಿಸಿದರು. ಮುಂದುವರಿದು ಸಚಿವರು, ಜಿಲ್ಲೆಯ ಅಭಿವೃದ್ಧಿ ವಿಷಯವಾಗಿ ಡಿಸಿ, ಸಿಇಒ ಇಬ್ಬರು ಜೊತೆಯಾಗಿ ಸಾಗಬೇಕು. ತಹಸೀಲ್ದಾರ್‌ಗಳು, ತಾಪಂ ಇಒಗಳು ಅವರಿಗೆ ಸಾಥ್ ನೀಡಬೇಕೆಂದು ಸಮನ್ವಯತೆ ಪಾಠ ಮಾಡಿದರು.
ಜೊತೆಗೆ ಈ ಪರಿಪಾಠ ಮುಂದುವರಿದರೆ ನಿದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಿರಿಯ ಶಾಸಕ ಟಿಬಿಜೆ ಡಿಸಿ, ಸಿಇಓ ಜಿಲ್ಲೆಯ ಆಡಳಿತದ ಎರಡು ಕಣ್ಣುಗಳಿದ್ದಂತೆ ಅವರಿಗೆ ಸಹಕಾರ ಕೊಡಬೇಕಾದದ್ದು ಅಧಿಕಾರಿಗಳ ಕರ್ತವ್ಯ ಎಂದರು.
ಮುಖ್ಯಮಂತ್ರಿಗಳು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ವಿಶೇಷಾನುದಾನ ಘೋಷಿಸಿದ್ದು, ಈ ಅನುದಾನದಡಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ಮೇರೆಗೆ ಬಳಸುವಂತೆ ಸಚಿವರು ಸಭೆಯಲ್ಲಿ ಶಾಸಕರಿಗೆ ಸೂಚಿಸಿ ತಿಂಗಳಾಂತ್ಯದಲ್ಲಿ ಕಾಮಗಾರಿಗಳ ಪಟ್ಟಿ ನೀಡುವಂತೆ ತಿಳಿಸಿದರು. ಶಾಸಕ ಸುರೇಶ್‌ಗೌಡ ನಿಜಕ್ಕೂ ಅನುದಾನ ಸಿಗಲಿದೆಯೇ ಎಂದು ಪ್ರಶ್ನಿಸಿದರೆ, ಶಾಸಕ ಜ್ಯೋತಿಗಣೇಶ್ ದೇವಾಲಯಕ್ಕೂ ನೀಡಬಹುದೇ ಎಂದು ಸ್ಪಷ್ಟನೆ ಕೇಳಿದರು. ಮಾರ್ಗಸೂಚಿಯಂತೆ ಅನುದಾನ ಹಂಚಿಕೆಯಾಗಲಿದೆ. ಇದಕ್ಕಾಗಿಯೇ ಸಿಎಂ 8ಸಾವಿರ ಕೋಟಿ ಬಜೆಟ್‌ನಲ್ಲಿ ಅಲೋಕೇಷನ್ ಮಾಡಿದ್ದಾರೆಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.