ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ಇದೇ ಪ್ರಥಮ ಬಾರಿಗೆ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಮಂಗಳವಾರದಿಂದ ನಾಲ್ಕು ದಿನಗಳ ಕಾಲ (ಮಾರ್ಚ್ 12ರಿಂದ 15ರವರೆಗೆ) ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ರೀಡಾಂಗಣದಲ್ಲಿ ನಡೆಸಲು ಗೃಹ ಸಚಿವ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಜಿ ಪರಮೇಶ್ವರ್ ಅವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಮಧ್ಯಪ್ರದೇಶದ ಏಕಲವ್ಯ ವಿಶ್ವವಿದ್ಯಾಲಯ, ತುಮಕೂರು, ರಾಣಿ ಚೆನ್ನಮ್ಮ, ಬೆಂಗಳೂರು, ಕರ್ನಾಟಕ, ದಾವಣಗೆರೆ, ಮಂಗಳೂರು ವಿಶ್ವವಿದ್ಯಾಲಯ, ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ, ಶಾತವಾಹನ ವಿಶ್ವವಿದ್ಯಾಲಯ, ಆಂಧ್ರದ ವಿಶ್ವವಿದ್ಯಾಲಯ, ರಾಜಸ್ಥಾನ, ಪುಣೆ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳ ವಿಶ್ವವಿದ್ಯಾಲಯಗಳು ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದವು.
ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ, ಸಾಹೇ ವಿವಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿರುವ ತಂಡಗಳಿಗೆ ಶುಭ ಕೋರಿದರು.
“ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್‌ಬಾಲ್ ಚಾಂಪಿಯನ್‌ಶಿಪ್ ಆಯೋಜಿಸಿರುವುದು ಸಂತಸದ ವಿಷಯ. ಪಂದ್ಯಾವಳಿಗೆ 53 ತಂಡಗಳು ಆಗಮಿಸಿವೆ. ಕ್ರೀಡೆ ಅಂದಮೇಲೆ ಗೆಲುವು ಸೋಲು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಮೊದಲ ಗೆದ್ದ ನಾಲ್ಕು ತಂಡಗಳಿಗೆ ಬಹುಮಾನ ನೀಡಲಾಗುವುದು” ಎಂದರು.
“ಬಾಲ್ಯದಲ್ಲಿ ಆಟವಾಡಿದ ಆಟಗಳ ನೆನಪಾಗುತ್ತಿದೆ ಎಂದು ಅವರು ಅಂತರ್ ರಾಜ್ಯ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಜೊತೆಗೆ ಕ್ರೀಡೆ ಎನ್ನುವಂತಹದ್ದು ಎಲ್ಲರನ್ನು ಒಟ್ಟುಗೂಡಿಸುತ್ತದೆ. ಇದು ಐಕ್ಯತೆಯ ಸಂಕೇತವಾಗಿದೆ” ಎಂದು ಎಲ್ಲ ಕ್ರೀಡಾಪಟುಗಳಿಗು ಶುಭ ಹಾರೈಸಿದರು.
ವೇದಿಕೆಯ ಕಾರ್ಯಕ್ರಮವನ್ನು ರಾಷ್ಟ್ರಗೀತೆ ಹಾಡುವುದರೊಂದಿಗೆ ಮುಕ್ತಾಯಗೊಳಿಸಿ, ಮೈದಾನದಲ್ಲಿ ಕ್ರೀಡೆಯನ್ನು ಆರಂಭಿಸಿದರು.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಒಂದು ತಂಡದಲ್ಲಿ 12 ಮಂದಿಯಿದ್ದು, 852 ನೆಟ್‌ಬಾಲ್ ಕ್ರೀಡಾಪಟುಗಳು, ತಂಡದ ಕೋಚ್ ಮತ್ತು ಮ್ಯಾನೇಜರ್, 60 ಟ್ರೋಫಿಗಳು, 250 ಮಂದಿ ಸಂಘಟಕನಾ ಸಮಿತಿ ಸದಸ್ಯರು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಅಖಿಲ ಭಾರತ ನೆಟ್‌ಬಾಲ್ ಫೆಡರೇಷನ್, ಕರ್ನಾಟಕ ಮತ್ತು ತುಮಕೂರು ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಈ ನೆಟ್‌ಬಾಲ್ ಟೂರ್ನಿಯನ್ನು ಆಯೋಜಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಿವಗಂಗೋತ್ರಿಯಲ್ಲಿ ಮಹಿಳೆಯರದ್ದೇ ಶೈಕ್ಷಣಿಕ ಸಾಧನೆ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯೆ ಕನ್ನಿಕಾ ಪರಮೇಶ್ವರಿ, ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಸಾಹೇ ವಿವಿಯ ಉಪ ಕುಲಪತಿ ಡಾ ಕೆ ಬಿ ಲಿಂಗೇಗೌಡ, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರ ಡಾ ವಿವೇಕ್ ವೀರಯ್ಯ, ಸಾಹೇ ವಿವಿ ರಿಜಿಸ್ಟಾರ್ ಡಾ ಎಂ ಎ ಝೆಡ್ ಕುರಿಯನ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಸಾಣೆಕೊಪ್ಪ ಸೇರಿದಂತೆ ಸಾಹೇ ವಿಶ್ವ ವಿದ್ಯಾಲಯದ ಪರೀಕ್ಷಾ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಗುರುಶಂಕರ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
