ಸಿನಿಮಾ ರಂಗಕ್ಕೆ ಮೂಲ ಎನಿಸಿದ ಗ್ರಾಮೀಣ ಸೊಗಡಿನ ನಾಟಕ ಕಲೆ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಅರಳುವ ಸಿರಿ ಮೊಳಕೆಯಲ್ಲಿ ಎಂಬಂತೆ ಉತ್ತಮ ನಟರ ಕಾಣಿಕೆ ಗ್ರಾಮೀಣ ಕಲೆ ನೀಡಿದೆ ಎಂದು ಕಡಬ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಂಗಯ್ಯ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೊಮ್ಮನಹಳ್ಳಿ ಗ್ರಾಮದಲ್ಲಿ ಮದಕರಿ ಕಲೆ ಮತ್ತು ಸಾಂಸ್ಕೃತಿಕ ತಂಡ ಆಯೋಜಿಸಿದ್ದ ನಾಟಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕೃಷಿಕ ವರ್ಗದ ಮನರಂಜನೆಗೆ ಹಳ್ಳಿಗಳಲ್ಲಿ ಆಯೋಜಿಲಾಗುತ್ತಿದ್ದ ನಾಟಕಗಳು ಬಹುತೇಕ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಾಗಿದ್ದವು. ಈ ಬಣ್ಣದ ನಡುವೆ ತಮ್ಮದೇ ಹಣ ವೆಚ್ಚ ಮಾಡಿ ರಂಗಕಲೆ ಮಾಡುತ್ತಿದ್ದ ಹಳ್ಳಿ ಕಲಾವಿದರ ಕಲೆಗೆ ಮೆಚ್ಚುಗೆ ಸಿಗಲೇಬೇಕು” ಎಂದರು.
“ಜಾತ್ರೆ, ಹಬ್ಬಗಳ ಸಮಯ ಸಿದ್ಧಗೊಳ್ಳುವ ರಂಗ ಸಜ್ಜಿಕೆ ಅನೇಕ ಕಲಾವಿದರನ್ನು ಹುಟ್ಟುಹಾಕಿದೆ. ಅನಕ್ಷರಸ್ಥರಾಗಿ ಸರಾಗವಾಗಿ ನಾಟಕದ ಪದಗಳು, ಕಂದಗಳು ಹಾಡುವ ಗ್ರಾಮೀಣ ಕಲಾವಿದ ಸಂಸ್ಕೃತ ಕೂಡಾ ಸುಲಲಿತವಾಗಿ ಹಾಡುತ್ತಿದ್ದರು. ಇಡೀ ರಾತ್ರಿ ನಡೆಯುವ ನಾಟಕಗಳಲ್ಲಿ ತಪ್ಪಿಲ್ಲದೆ ಪ್ರದರ್ಶನ ಕೊಡುವ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಟಿವಿ ಮಾಧ್ಯಮದ ನಡುವೆ ಗ್ರಾಮೀಣ ಭಾಗದಲ್ಲಿ ನಾಟಕ ಪ್ರದರ್ಶನ ಮಾಡಿ ಕಲೆಯನ್ನು ಜೀವಂತ ಉಳಿಸುವ ಕೆಲಸ ಮಾಡುವ ಮದಕರಿ ಕಲೆ ಮತ್ತು ಸಾಂಸ್ಕೃತಿಕ ತಂಡಕ್ಕೆ ಮೆಚ್ಚುಗೆ ನೀಡಬೇಕು” ಎಂದರು.
ಮದಕರಿ ಕಲೆ ಮತ್ತು ಸಾಂಸ್ಕೃತಿಕ ತಂಡದ ಕಾರ್ಯದರ್ಶಿ ಸೋಮಲಾಪುರ ಕೃಷ್ಣಮೂರ್ತಿ ಮಾತನಾಡಿ, “ರಂಗ ಕಲೆಗೆ ಪ್ರೋತ್ಸಾಹ ಅತ್ಯಗತ್ಯ. ಎಲೆಮರೆ ಕಾಯಿಯಂತೆ ಗ್ರಾಮೀಣ ಕಲಾವಿದರು ಮರೆಯಾಗುತ್ತಿದ್ದಾರೆ. ಇಂತಹ ಸಮಯ ಹಳ್ಳಿಗಳಲ್ಲಿ ನಾಟಕದ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಸಿದ್ಧಪಡಿಸುವ ಕೆಲಸ ನಮ್ಮ ತಂಡ ಮಾಡುತ್ತಿದೆ. ಅನೇಕ ವರ್ಷದಿಂದ ಈ ಕಾರ್ಯವನ್ನು ಎಡಬಿಡದೆ ಮಾಡಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ʼಶಾಂತಿ, ಸೌಹಾರ್ದತೆ, ಸಹಬಾಳ್ವೆ ನಮ್ಮ ಪರಂಪರೆʼ ಪೋಸ್ಟರ್ ಬಿಡುಗಡೆ
ಇದೇ ಸಂದರ್ಭದ ನಾಟಕ ಹಬ್ಬ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಸಂಧಾನ ಹಾಸ್ಯ ನಾಟಕ ಹಾಗೂ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನ ಮಾಡಿದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯೆ ಪೂರ್ಣಲಕ್ಷ್ಮೀ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಆರ್ ಗುರುಸ್ವಾಮಿ, ಮುಖಂಡರುಗಳಾದ ಬಸವರಾಜು, ಚಂದ್ರಶೇಖರ್, ರಾಮಕೃಷ್ಣಯ್ಯ, ಕಿರಣ್, ರಮೇಶ್ ಸೇರಿದಂತೆ ಇತರರು ಇದ್ದರು.