ಲೋಕಾ ಅದಾಲತ್ ನಡೆಸುವ ಮದ್ಯಸ್ಥಿಕೆಯಿಂದ ಸುಲಭ ನ್ಯಾಯದಾನ ಪಡೆಯಲು ಸಾಧ್ಯ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯಂತ್ ಕುಮಾರ್ ಹೇಳಿದರು.
ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಪ್ರಥಮ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಕ್ಲಿಷ್ಟಕರ, ನಾಜೂಕಿನ ಪ್ರಕರಣಗಳನ್ನು ಸಾಮಾನ್ಯ ನ್ಯಾಯದಾನದಲ್ಲಿ ಬಗೆಹರಿಸಲು ಕಷ್ಟಸಾಧ್ಯ. ಇಂತಹ ಪ್ರಕರಣಗಳು ಅತಿ ಸುಲಭವಾಗಿ ಮಧ್ಯಸ್ಥಿಕೆ ಮೂಲಕ ಹೇಗೆ ಬಗೆಹರಿಸಬಹುದಾಗಿದೆ ಎಂಬುದನ್ನು ಕತೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಜನರು ತಮ್ಮ ತಮ್ಮ ಪಾತ್ರಗಳಿಗೆ ಅಂಟಿಕೊಳ್ಳಬಾರದು. ಬದುಕಿನ ಸನ್ನಿವೇಷ, ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಕಲಿತರೆ ಬದುಕು ಸುಖಮಯವಾಗಿರಲಿದೆ. ಹೆಣ್ಣು, ತಾಯಿ, ತಂಗಿ, ಹೆಂಡತಿ ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಈ ಯಾವ ಪಾತ್ರಗಳಿಗೂ ಅಂಟಿಕೊಳ್ಳುವುದಿಲ್ಲ. ಆದರೆ ಅತ್ತೆಯ ಪಾತ್ರಕ್ಕೆ ಒಂದಾಗ ಅಂಟಿಕೊಳ್ಳುತ್ತಾರೆ. ಇದುವೇ ಅತ್ತೆ, ಸೊಸೆಯ ಗಲಾಟೆಗೆ ಕಾರಣವಾಗುತ್ತದೆ. ಪ್ರಾಮಾಣಿಕತೆ, ಬದ್ಧತೆ, ತಾಳ್ಮೆ, ಸಹನೆ ಇದ್ದಲ್ಲಿ ಸಾಧನೆಯೂ ಸಾಧ್ಯ, ಸುಖಮಯ ಜೀವನವೂ ಸಾಧ್ಯ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನೀಸಾ ಮಾತನಾಡಿ, ಯುವ ಜನತೆ ದಾರಿ ತಪ್ಪಿ ನಡೆಯುತ್ತಿದೆ. ಇದು ಸಮಾಜದ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗುತ್ತಿದೆ. ಕಾನೂನು ಸೇವಾ ಪ್ರಾಧಿಕಾರಕ್ಕೆ ಮಕ್ಕಳ ಸಮಸ್ಯೆಗಳನ್ನು ಹೊತ್ತು ತರುವ ಪೋಷಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಕಂಡರೆ ನನಗೆ ಮೆಚ್ಚು. ಕಾನೂನು ಸೇವಾ ಪ್ರಾಧಿಕಾರದ ಕೆಲಸಗಳನ್ನು ಮಾಡುವುದರಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳ ಕೆಲಸ ಅಚ್ಚುಮೆಚ್ಚಿನದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಡಾ. ರಮೇಶ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನ್ಯಾಯಬದ್ಧತೆ, ಸಾಮಾಜಿಕ ನ್ಯಾಯ, ಪಾರದರ್ಶಕತೆ, ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಎಚ್‌ಎಂಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ, ಉಪ ಪ್ರಾಂಶುಪಾಲ ಓಬಯ್ಯ, ಪ್ರಾಧ್ಯಾಪಕರಾದ ಸಿ.ಕೆ. ಮಹೇಂದ್ರ, ಮಮತಾ, ಕಾಶಿಪ್, ಗ್ರಂಥಪಾಲಕ ಸುಬ್ಬು, ಸೂಪರಿಡಿಂಡ್ ಟೆಂಟ್ ಜಗದೀಶ್ ಇತರರು ಇದ್ದರು.