ನಾಡಿನ ಎಲ್ಲ ಜಾತಿ ಮತ್ತು ಧರ್ಮದ ಜನರು, ಮಹಿಷ ಮಹಾರಾಜರ ವಿಚಾರ ಮತ್ತು ಮಹಿಷ ಮಂಡಲದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮಹಿಷ ಉತ್ಸವದಿಂದ ನಾಡಿನ ಬಹು ಸಂಖ್ಯಾತ ಜನರಿಗೆ ಶಕ್ತಿ ಬಂದಂತಾಗಿದೆ. ಮುಚ್ಚಿ ಹೋದ ಇತಿಹಾಸ ಮೂಡಿ ಬರಲಿ ಎಂದು ಡಿಎಸ್‌ಎಸ್ ಜಿಲ್ಲಾ ಅಧ್ಯಕ್ಷ ಪಿ.ಎನ್.ರಾಮಯ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಮಹಿಷಾ ದಸರಾ ಮಹೋತ್ಸವ ಆಯೋಜಿಸಿದ್ದವು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕೆಲವು ಸ್ವಾಮೀಜಿಗಳು, ಬಿಜೆಪಿ ನಾಯಕರು ಹಾಗೂ ಜಾತಿವಾದಿ ವಿಚಾರವಂತರು, ನಮ್ಮ ರಾಜರ ಬಗ್ಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಯಾವುದೇ ಧರ್ಮ, ಜಾತಿ, ಆಚಾರ-ವಿಚಾರಗಳ ಬಗ್ಗೆ ಮಾತಾಡಬೇಕಾದರೆ, ಜಾಗ್ರತೆಯಿಂದ ಮಾತಾಡಬೇಕು. ಏಕೆಂದರೆ, ಜನರ ಆತ್ಮ ಗೌರವಕ್ಕೆ ದಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಸಂಪ್ರದಾಯದಂತೆ ಮಹಿಷ ದಸರಾವನ್ನು ವಿಜೃಂಭಣೆಯಿಂದ ಅಚರಣೆ ಮಾಡಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗದಾಮಯ್ಯ, ಬಂಡೇ ಕುಮಾರ್, ಲಕ್ಷ್ಮೀರಂಗಯ್ಯ, ಭಾನುಪ್ರಕಾಶ್, ರಾಜಣ್ಣ, ವಾಸುದೇವ ನಾದೂರು, ಕುಣಿಹಳ್ಳಿ ಮಂಜುನಾಥ್ ಹಾಗೂ ಸಂಘಟನೆ ಮುಖಂಡರು ಹಾಜರಿದ್ದರು.