ಶೋಷಿತ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಕಾಂತರಾಜ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ, ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 28ರಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಪಕ್ಕದ ಮೈದಾನದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಮನಿತ ಸಮಾಜ, ತಮ್ಮ ಹಕ್ಕುಗಳನ್ನ ಪಡೆಯಬೇಕಾದರೆ ಹೋರಾಟವೊಂದೇ ಮಾರ್ಗ. ಈ ಹಿನ್ನೆಲೆಯಲ್ಲಿ ಸಂವಿಧಾನದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಡಿಯಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಇಂದು ದೇಶ ಗಂಡಾಂತರವನ್ನು ಎದುರಿಸುತ್ತಿದೆ. ಪ್ರಜಾತಂತ್ರದ ಮೇಲೆ ಧರ್ಮತಂತ್ರ ಸವಾರಿ ಮಾಡುತ್ತಿದ್ದು, ಪ್ರಜಾತಂತ್ರ ಉಳಿದರೆ ಮಾತ್ರ, ಜನರ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲಾ ಶೋಷಿತರು ಒಂದೇ ವೇದಿಕೆಯಲ್ಲಿ ಬಂದು ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದರ ಮೂಲಕ ಶೋಷಿತರಿಗೆ ಏಳಿಗೆಗೆ ಅಡ್ಡಗಾಲಾಗಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲು ಈ ಸಮಾವೇಶ ಮಹತ್ವ ಪಡೆದುಕೊಳ್ಳಲಿದೆ.
ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲಾಢ್ಯರ ಬೆದರಿಕೆಗಳಿಗೆ ಬಲಿಯಾಗದೆ ನ್ಯಾಯವಾದಿ ಕಾಂತರಾಜ ಅವರ ವರದಿಯನ್ನು ಸ್ವೀಕರಿಸಿ, ಸಾರ್ವಜನಿಕ ಚರ್ಚೆಗೆ ಬಿಟ್ಟು, ತದನಂತರ ಜಾರಿಗೆ ತರಬೇಕೆಂಬುದು ಎಲ್ಲಾ ಶೋಷಿತ ಸಮುದಾಯಗಳ ಒತ್ತಾಯವಾಗಿದೆ ಎಂದು ಮಾವಳ್ಳಿ ಶಂಕರ್ ನುಡಿದರು.
ಶೋಷಿತರ ಏಳಿಗೆಗೆ ಅಡ್ಡಗಾಲು ಹಾಕುವವರು ಅಂದೂ ಇದ್ದರು, ಇಂದೂ ಇದ್ದಾರೆ. ಚಿನ್ನಪ್ಪರೆಡ್ಡಿ ವರದಿ, ವೆಂಕಟಸ್ವಾಮಿ ವರದಿ, ರಾಜೇಂದ್ರ ಸಾಚಾರ್ ವರದಿಗಳು ಜಾರಿಗೆ ಬರದಂತೆ ಅಡ್ಡಿ ಮಾಡಿದವರೇ, ಇಂದು ಕಾಂತರಾಜ ವರದಿ ಸ್ವೀಕರಿಸಿದಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸ್ವಾಮೀಜಿಯೊಬ್ಬರು ವರದಿಯನ್ನು ಸ್ವೀಕರಿಸದಂತೆ ನೀಡಿರುವ ಹೇಳಿಕೆ ಸರಿಯಲ್ಲ. ವರದಿಯಲ್ಲಿ ಏನಿದೆ ಎಂದು ತಿಳಿಯದೆ ಈ ರೀತಿಯ ಹೇಳಿಕೆ ನೀಡುವುದು ಅನಾಗರಿಕ ನಡೆ. ಹಾಗಾಗಿ ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಘಟನಾ ಸಂಚಾಲಕ ಅನಂತನಾಯಕ್ ಮಾತನಾಡಿ, ಶೋಷಿತ ಸಮುದಾಯಗಳು ಒಂದೇ ವೇದಿಕೆಯಲ್ಲಿ ಸೇರಿ, ಸಾಮಾಜಿಕ ನ್ಯಾಯವನ್ನು ಕೇಳುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಿದ್ದು, ಎಲ್ಲಾ ಶೋಷಿತ ಸಮುದಾಯದವರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಮಚಂದ್ರಪ್ಪ ಮಾತನಾಡಿ, ಕಳೆದ ಎಂಟು ತಿಂಗಳ ಹಿಂದೆ ಶೋಷಿತ ಸಮುದಾಯಗಳು ತಮ್ಮ ನ್ಯಾಯಬದ್ದ ಹಕ್ಕಿಗಾಗಿ ಈ ಒಕ್ಕೂಟವನ್ನು ಸ್ಥಾಪಿಸಿದ್ದು, ಇದು ಮೊದಲ ಸಮಾವೇಶವಾಗಿದೆ. ಕೆಲವರ ಒತ್ತಡಕ್ಕೆ ಮಣಿಯದೆ, ಬಹುಸಂಖ್ಯಾತರ ಬೇಡಿಕೆಯಂತೆ ಕಾಂತರಾಜ ವರದಿ ಸ್ವೀಕರಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಸುಮಾರು 3 ಲಕ್ಷಕ್ಕೂ ಅಧಿಕ ಜನರು ಒಂದೆಡೆ ಸೇರುತ್ತಿದ್ದು, ಎಲ್ಲರೂ ಪಾಲ್ಗೊಂಡು ಶೋಷಿತರ ಶಕ್ತಿ ಪ್ರದರ್ಶಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ನಾಗಣ್ಣ, ಕೊಟ್ಟಶಂಕರ್, ಧನಿಯಕುಮಾರ್, ಆಂಜನಪ್ಪ, ಕುಮಾರನಾಯ್ಕ್, ಸುರೇಶ್, ಎಂ.ಬಿ. ಈರಣ್ಣ, ನರಸಿಂಹಯ್ಯ, ಶ್ರೀನಿವಾಸ್, ವೆಂಕಟೇಶ್, ಡಾ. ಪಾಪಣ್ಣ, ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.