ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ಕ್ರಮವನ್ನು ಖಂಡಿಸಿ ಹಾಗೂ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಬೆಂಗಳೂರಿನ ಆರ್‌ಬಿಐ ಪ್ರಾದೇಶಿಕ ಕಚೇರಿ ಎದುರು ಜ.29ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮನವಿ ಮಾಡಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರಿನ ಕೆ.ಎಸ್.ಪುಟ್ಟಣ್ಣಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗೀಯ ಮಟ್ಟದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದರಿಂದ ರೈತರ ಮೇಲೆ ಹೊಡೆತ ಬೀಳಲಿದೆ ಕೃಷಿ ವಲಯಕ್ಕೂ ಹಿನ್ನೆಡೆಯಾಗಲಿದೆ.ಹಾಗಾಗಿ ರಾಜ್ಯದ ಎಲ್ಲಾ ವಿಭಾಗೀಯ ಮಟ್ಟದ ಸಭೆಗಳನ್ನು ನಡೆಸಿದ್ದು,ಇಂದು ಬೆಂಗಳೂರು ವಿಭಾಗೀಯ ಮಟ್ಟದ ಸಭೆಯನ್ನು ಹೆಬ್ಬೂರಿನಲ್ಲಿ ಕರೆಯಲಾಗಿದೆ.ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾ ಪುರ,ತುಮಕೂರು ಜಿಲ್ಲೆಯ ರೈತ ಮುಖಂಡರು ಆಗಮಿಸಿದ್ದೀರಿ,ಬೆಂಗಳೂರಿಗೆ ಹತ್ತಿರದಲ್ಲಿರುವ ನಿಮ್ಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.ಬಹಳ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುವ ನಿಟ್ಟಿನಲ್ಲಿ ನಿವೆಲ್ಲರೂ ಕೈಜೋಡಿಸಬೇಕೆಂದು ಎ.ಗೋವಿಂದರಾಜು ತಿಳಿಸಿದರು.

ಕೇಂದ್ರ ಸರಕಾರ ಕಳೆದ 3 ವರ್ಷಗಳಿಂದಲೂ ಪ್ರತಿವರ್ಷ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬರುತ್ತಿದೆ.ಕೇಂದ್ರದ ಈ ನೀತಿಯಿಂದಾಗಿ ನಬಾರ್ಡ್ ರೈತರಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಕಡಿಮೆ ಮಾಡಿ,ಈ ಸಾಲಿನಲ್ಲಿ ಕರ್ನಾಟಕಕ್ಕೆ ನೀಡುತ್ತಿದ್ದ 5600 ಕೋಟಿಗೆ ಬದಲಾಗಿದೆ 2600 ಕೋಟಿ ನೀಡಿ, ಸಾಲವನ್ನು ಪ್ರಮಾಣವನ್ನು ಶೇ.58ರಷ್ಟು ತಗ್ಗಿಸಿದೆ.ಆ ಮೂಲಕ ನಾನು ರೈತರ ಪರವಾಗಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರಕಾರ ರವಾನಿಸಿದೆ.ಸಹಕಾರಿ ಸಂಸ್ಥೆಗಳಾದ ವಿ.ಎಸ್.ಎಸ್.ಎನ್,ಡಿಸಿಸಿ ಬ್ಯಾಂಕ್, ಪಿ.ಎಲ್.ಡಿ.ಬ್ಯಾಂಕುಗಳು ನೀಡುತಿದ್ದು ಕೃಷಿ ಸಾಲಗಳಿಗೆ ಮೂಲವೇ ನರ್ಬಾಡ್‌ನ ಸಾಲವಾಗಿದೆ.ಶೂನ್ಯ ಬಡ್ಡಿದರ, ಕಡಿಮೆ ಬಡ್ಡಿದರ ಸಾಲಕ್ಕೆ ಮೂಲವೇ ನಬಾರ್ಡ್. ಕೇಂದ್ರದ ಈ ಧೋರಣೆಯಿಂದ ನಬಾರ್ಡ್ ಸ್ಥಾಪನೆಯ ಹಿಂದಿನ ಉದ್ದೇಶವೇ ಮೂಲೆಗುಂಪಾಗಿದೆ ಎಂದರು.

ಕೃಷಿ ಸಾಲಕ್ಕಾಗಿ ವಾಣಿಜ್ಯ ಬ್ಯಾಂಕುಗಳಿಗೆ ಹೆಚ್ಚಿನ ಬಡ್ಡಿಗೆ ತರಬೇಕಾಗುತ್ತದೆ. ಇದು ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ವಹಿಸಲು ಹುನ್ನಾರ ನಡೆಸಿದೆ.ರೈತರು ಎಚ್ಚೆತ್ತು ಕೊಳ್ಳದಿದ್ದರೆ,ಮುಂದೊಂದು ದಿನ ನಮ್ಮ ಹೊಲ,ಗದ್ದೆಗಳಲ್ಲಿ ನಾವೇ ಕೂಲಿಯಾಳಾಗಿ ದುಡಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.ಕೇಂದ್ರ ಸರಕಾರ ರೈತರ ನಿರಂತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸಮಯದಲ್ಲಿ ನೀಡಿದ್ದ ಲಿಖಿತ ಭರವಸೆಗಳಾದ ಎಂ.ಎಸ್.ಪಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆಗಳ ವಾಪಸ್‌ಗೆ 3ವರ್ಷ ಕಳೆದರು ಯಾವುದೇ ಕ್ರಮ ಕೈಗೊಂಡಿಲ್ಲ.ಇದರ ವಿರುದ್ದ ಜಗದೀಶ್‌ಸಿಂಗ್, ದಲೈವಾಲ್ ಅವರು ಕಳೆದ 70 ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿದ್ದರೂ ಸರಕಾರ ಗಮನಹರಿಸಿಲ್ಲ.ಮಾನವಿಯತೆ ಇಲ್ಲದ ಸರಕಾರ ಇದಾಗಿದೆ. ಹಾಗಾಗಿ ಕೇಂದ್ರದ ವಿರುದ್ದ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ನಾವೆಲ್ಲರು ಸಿದ್ದಗೊಳ್ಳಬೇಕಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರೆ ದುಡಿಯುವ ಜನ ಸಂಕಷ್ಟ ಕ್ಕೀಡಾಗಿದ್ದಾರೆ. ಈ ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿ ಮಹಿಳೆಯರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಕಿರುಕುಳ ತಾಳಲಾರದೇ ಊರನ್ನೇ ತೊರೆಯುತ್ತಿದ್ದಾರೆ. ಈ ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಡೆಗಟ್ಟಲೇಬೇಕಾಗಿದೆ.ಹಾಗಾಗಿ ಈಗಾಗಲೇ ಸಿದ್ದಗೊಂಡಿರುವ ಕರಪತ್ರಗಳನ್ನು ಹಂಚಿ, ರೈತರನ್ನು ಎಚ್ಚರಿಸಿ, ಪ್ರತಿಭಟನೆಗೆ ಬರುವಂತೆ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರಪ್ಪ,ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣರೆಡ್ಡಿ, ಪ್ರಭುಗೌಡ, ಕೆ.ಮಲ್ಲಣ್ಣ,ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ,ಚಂದ್ರಶೇಖರ್, ವಿ.ಸಂ ದೊಡ್ಡ ಬಾಳಯ್ಯ, ಗೋಪಾಲ್, ಕೋಲಾರ ಜಿಲ್ಲಾ ನಾರಾಯಣಸ್ವಾಮಿ, ಕೃಷ್ಣಪ್ಪ,ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಗುಬ್ಬಿ ಲೋಕೇಶ್, ಕೊರಟಗೆರೆ ಶಬ್ಬೀರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.