ಮನರೇಗಾದಲ್ಲಿ ಉದ್ಯೋಗ ಖಾತ್ರಿಪಡಿಸಬೇಕು, ಇಲ್ಲದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೋಡಗದಾಲ ಗ್ರಾಮ ಪಂಚಾಯಿತಿ ಪಿಡಿಒ ಸೌಮ್ಯವತಿಗೆ ಮನರೇಗಾ ಕೂಲಿ ಕಾರ್ಮಿಕರ ಸಂಘಟನೆಯ ಕೂಲಿಕಾರರು ಮನವಿ ಸಲ್ಲಿಸಿದರು.
“ಕೋಡಗದಾಲ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಅವರದ್ದೇ ದರ್ಬಾರ್ ಆಗಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಐಇಸಿ ಚುಟುವಟಿಕೆ ನಿಷ್ಕ್ರಿಯಗೊಂಡು ಜನರಿಗೆ ಮನರೇಗಾ ಬಗ್ಗೆ ಮಾಹಿತಿ ಇಲ್ಲವಾಗಿದೆ. ಇದರ ಪರಿಣಾಮ ಮನರೇಗಾ ಕೂಲಿ ಹಣ ಪ್ರಭಾವಿಗಳ ಪಾಲಾಗುತ್ತಿದೆ. ಕೂಲಿ ಕೆಲಸ ಕೇಳಲು ಹೋದರೆ ಪಿಡಿಒ ಜೋರಾಗಿ ಮಾತನಾಡುತ್ತಾರೆ. ಯಾವುದೇ ಮಾಹಿತಿ ನೀಡದೆ ಸಬೂಬು ನೀಡಿ ಸಾಗಾಕುತ್ತಾರೆ” ಎಂದು ಮನರೇಗಾ ಕೂಲಿ ಕಾರ್ಮಿಕರ ಸಂಘಟನೆಯ ಮುಖಂಡ ಎಸ್ ಎ ಮುಕ್ಕಾಬಿ ಆರೋಪಿಸಿದರು.
“ಫಾರಂ ನಂಬರ್ 6 ರಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ಕೂಲಿ ಕೆಲಸ ನೀಡಬೇಕು. ಕೃಷಿ ಕಾರ್ಮಿಕರಿಗೆ ನೂರು ದಿನ ಉದ್ಯೋಗ ಖಾತ್ರಿ ಮಾಡಬೇಕು. ಆದರೆ ಕೋಡಗದಾಲ ಗ್ರಾ.ಪಂನಲ್ಲಿ 200 ಮಂದಿ ಅರ್ಜಿ ಸಲ್ಲಿಸಿದರೆ 70 ಜನರಿಗೆ ಮಾತ್ರ ಕೂಲಿ ಕೆಲಸ ಕೊಟ್ಟಿದ್ದಾರೆ. ಹಾಗಾಗಿ ಉಳಿದ 130 ಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು” ಎಂದು ಆಗ್ರಹಿಸಿದರು.
“ಮುಖ ತೋರಿಕೆಗೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಫೋಟೋ ತೆಗೆಸಿ, ಮನರೇಗಾ ಕಾಮಗಾರಿ ಮಾಡಿಸಿ, ವಂಚಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಉದ್ಯೋಗ ಖಾತ್ರಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು” ಒತ್ತಾಯಿಸಿದರು.
“ಕೋಡಗದಾಲ, ಬ್ಯಾಲ್ಯ, ಪುರವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐಇಸಿ ಚುಟುವಟಿಕೆಗಳು ನಿಷ್ಕ್ರಿಯವಾಗಿದ್ದು, ಜನರಿಗೆ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಇಲ್ಲಿಯ ಐಇಸಿ ಕೋಆರ್ಡಿನೇಟರ್ ಯಾರೆಂಬುದೇ ತಿಳಿಯುತ್ತಿಲ್ಲ. ಹಾಗಾಗಿ ಮನರೇಗಾ ಕೆಲಸ ಪ್ರಭಾವಿಗಳ ಪಾಲಾಗುತ್ತಿದೆ. ಬಡ ಕೂಲಿ ಕಾರ್ಮಿಕರು ಫೋಟೋಕ್ಕೆ ಸೀಮಿತವಾಗಿ, ಉದ್ಯೋಗ ಖಾತ್ರಿ ಹಣ ಪ್ರಭಾವಿಗಳ ಜೇಬಿಗೆ ಸೇರುತ್ತಿದೆ. ಮಧುಗಿರಿ ಮನರೇಗಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಲಿಕಾರರ ಕೈಯಲ್ಲಿ ಮೂಲ ಜಾಬ್ ಕಾರ್ಡ್‌ಗಳೂ ಇಲ್ಲ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬರ ಪರಿಹಾರ ವಿಚಾರದಲ್ಲಿ ರೈತರಿಗೆ ಮಲತಾಯಿ ಧೋರಣೆ: ಎಐಕೆಕೆಎಸ್
ಪ್ರತಿಭಟನೆಯಲ್ಲಿ ಮನರೇಗಾ ಕಾರ್ಮಿಕರುಗಳಾದ ರಂಗಸ್ವಾಮಯ್ಯ, ರಾಮಕ್ಕ, ಆದಿಲಕ್ಷ್ಮಮ್ಮ, ಪಾಪಕ್ಕ, ಜಬೀನ್ ತಾಜ್, ಚಿಕ್ಕರಂಗಮ್ಮ, ಲಕ್ಕಮ್ಮ, ಗುರುಮೂರ್ತಿ, ಪರಮೇಶ್ವರ್, ಕದರಪ್ಪ, ಹನುಮಕ್ಕ, ಗಂಗಮ್ಮ, ಯಲ್ಲಮ್ಮ, ರಾಜಣ್ಣ, ಶಕುಂತ, ಸುನಂದಮ್ಮ, ರಾಜಮ್ಮ, ಶಾಂತಮ್ಮ ಇದ್ದರು.