ದೀನ ದಲಿತರಿಗೆ ಆರ್ಥಿಕ ನೆರವು ನೀಡುತ್ತೇವೆಂದು ಗ್ರಾಮೀಣ ಭಾಗದಲ್ಲಿ ಗುಂಪು ರಚಿಸಿ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪೆನಿಗಳು ಮಹಿಳೆಯರಲ್ಲಿ ಘರ್ಷಣೆ ಹುಟ್ಟಿಸಿದ್ದಾರೆ. ಹಾಗಾಗಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಅವರ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಗುಬ್ಬಿ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಒತ್ತಾಯಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
“ಸಾಲ ತೀರುವಳಿಗೆ ಅವಕಾಶ ನೀಡದೆ ಗುಂಪಿನ ಇತರೆ ಸದಸ್ಯರ ಮೂಲಕ ಬೈಗುಳ, ನಿಂದನೆ ಮಾಡಿಸಿ ಅಪಮಾನ ಮಾಡುತ್ತಾರೆ. ಈ ಹಿನ್ನಲೆ ಆತ್ಮಹತ್ಯೆಗೆ ಶರಣಾದ ಮೂರು ಪ್ರಕರಣ ನಿದರ್ಶನವಾಗಿದೆ. ಈ ಕಾರಣಕ್ಕೆ ಮೈಕ್ರೋ ಫೈನಾನ್ಸ್ ಪರವಾನಗಿ ರದ್ದು ಮಾಡಬೇಕು. ಆತ್ಮಹತ್ಯೆಗೆ ಕಾರಣವಾದ ಫೈನಾನ್ಸ್ ಮೇಲೆ ಪ್ರಕರಣ ದಾಖಲಿಸಿ ಮೃತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
“ಮೈಕ್ರೋ ಫೈನಾನ್ಸ್ ಸಾಲ ಮರುಪಾವತಿ ಮಾಡಲಾಗದೆ ಆಗಿರುವ ಅವಮಾನಕ್ಕೆ ತಿಪಟೂರು ತಾಲ್ಲೂಕಿನ ಭಾಗ್ಯಮ್ಮ, ಶರಣಯ್ಯ, ನಾರಾಯಣಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದರ್ಪ ದೌರ್ಜನ್ಯ ಖಂಡಿಸಿ ಜುಲೈ 1 ರಂದು ತಿಪಟೂರು ನಗರದಲ್ಲಿ ದಸಂಸ ವಿಭಾಗೀಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಗುಬ್ಬಿ ತಾಲೂಕಿನ ಎಲ್ಲ ದಲಿತ ಮುಖಂಡರೂ ಕೂಡ ಆಗಮಿಸಬೇಕು” ಎಂದು ಕರೆ ನೀಡಿದರು.
ದಸಂಸ ತಾಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ನರಸೀಯಪ್ಪ ಮಾತನಾಡಿ, “ಹತ್ತು ಜನ ಮಹಿಳೆಯರ ಗುಂಪು ರಚಿಸಿ ಸಾಲ ವಸೂಲಿಗೆ ಇಡೀ ಗ್ರಾಮದಲ್ಲಿ ಮಹಿಳೆಯರ ನಡುವೆ ಜಗಳಕ್ಕೆ ಅಸಮಾಧಾನಕ್ಕೆ ಕಾರಣವಾಗಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿಗೆ ಗುಂಪಿನ ಸದಸ್ಯರಲ್ಲೇ ವೈಮನಸ್ಯ ಹುಟ್ಟಿಸಿದ್ದಾರೆ. ಸಾಲದ ಸ್ವಲ್ಪ ಹಣ ಬಾಕಿ ಇದ್ದರೂ ಚಕ್ರ ಬಡ್ಡಿ ವಸೂಲಿ ಮಾಡುವ ಕಂಪೆನಿಯು ನೀಡುವ ಕಿರುಕುಳಕ್ಕೆ ಆತ್ಮಹತ್ಯೆ ಪ್ರಕರಣ ನಡೆದಿದೆ. ಇಂತಹ ಫೈನಾನ್ಸ್ ಪರವಾನಗಿ ರದ್ದು ಮಾಡಿ ಕಿರುಕುಳ ನೀಡಿದ ಸಿಬ್ಬಂದಿ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ದಸಂಸ ಮಹಿಳಾ ಘಟಕದ ತಾಲೂಕು ಸಂಚಾಲಕಿ ಶಿವಮ್ಮ ಮಾತನಾಡಿ, “ಮಹಿಳೆಯರನ್ನು ಸಾರ್ವಜನಿಕವಾಗಿ ಅಶ್ಲೀಲವಾಗಿ ನಿಂದಿಸಲು ಪ್ರಚೋದನೆ ನೀಡುವ ಫೈನಾನ್ಸ್ ಕಂಪೆನಿಗಳು ಮಾನಸಿಕ ಕಿರುಕುಳಕ್ಕೆ ಕಾರಣವಾಗಿ, ಮಹಿಳೆಯರ ಆತ್ಮಹತ್ಯೆಗೆ ಕಾರಣವಾಗಿದ್ದಾರೆ. ಇಂತಹ ಕಂಪೆನಿಯ ವಿರುದ್ಧ ತಿಪಟೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನೆ ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಂಸ್ಥಾಪಕ ಸದಸ್ಯ ಕೆ ದೊರೈರಾಜು, ರೈತ ಸಂಘದ ಚನ್ನಬಸವಣ್ಣ, ರುದ್ರಮ್ಮ ಶಿವಮೊಗ್ಗ, ಎ ಗೋವಿಂದರಾಜು ಸೇರಿದಂತೆ ಇತರರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವದಾರಿಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ; ಎಚ್‌ಡಿಕೆಗೆ ರಕ್ತದಲ್ಲಿ ಪತ್ರ ಬರೆದ ಹೋರಾಟಗಾರ
ಈ ಸಂದರ್ಭದಲ್ಲಿ ಸಮಿತಿಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸೌಭಾಗ್ಯಮ್ಮ, ಟಿ ಜಿ ಸಚಿನ್, ಫಣೀಂದ್ರ ಮುನಿ, ರಾಜಣ್ಣ, ಮಧು, ಚೇತನ್, ಗಿರೀಶ್, ದೊಡ್ಡಮ್ಮ, ಕಲ್ಪನಾ ಸೇರಿದಂತೆ ಇತರರು ಇದ್ದರು.
