ಹಣವಸೂಲಿ ನೆಪದಲ್ಲಿ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಗಂಭೀರ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹಂದನಕರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಹಂದನಕರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಾಲ ವಸೂಲಾತಿ ನೆಪದಲ್ಲಿ ಮನೆಗೆ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರಣ್ ಎಂಬಾತನಿಂದ ಈ ಪೈಶಾಚಿಕ ಕೃತ್ಯ ನಡೆದಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಏಪ್ರಿಲ್ 24 ರಂದು ನಡೆದ ಘಟನೆ
ಈ ಘಟನೆ ಏಪ್ರಿಲ್ 24ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿಯ IIFL ಕಂಪನಿಯ ಸಿಬ್ಬಂದಿ ಕಿರಣ್ ಎಂಬಾತ ಸಾಲ ವಸೂಲಿಗೆ ಹೋದ ವೇಳೆ ಬಾಲಕಿ ಒಬ್ಬಳೇ ಮನೆಯಲ್ಲಿ ಇರುವುದನ್ನ ಕಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅತ್ಯಾಚಾರ ವಿರೋಧಿಸಿ ಬಾಲಕಿ ಕಿರುಚಾಡಿದಾಗ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದೂ ಅಲ್ಲದೆ, ಕೀಚಕ ಸಿಬ್ಬಂದಿ ಬಾಲಕಿಯ ಕುತ್ತಿಗೆ, ಭುಜ ಸೇರಿದಂತೆ ಬಾಲಕಿಯ ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿ, ಪರಾರಿಯಾಗಿದ್ದನು.
ಬಾಲಕಿ ಮೇಲೆ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಪೋಷಕರು ಹಂದನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಸಿಕೊಂಡ ಪೊಲೀಸರು ಎರಡೇ ದಿನದಲ್ಲಿ ಕಿರಾತಕ ಆರೋಪಿಯನ್ನು ಪತ್ತೆಹಚ್ಚಿ ಆತನ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರಿ ಆರೋಪಿ ಕಿರಣ್ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಮೈಕ್ರೋ ಫೈನಾನ್ಸ್(Micro Finance) ಕಂಪೆನಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಮಾತ್ರವಲ್ಲ ಹಣ ವಸೂಲಿಗೆ ಸಂಬಂಧಿಸಿದಂತೆ ಸಿಬ್ಬಂದಿಗಳು ಕೆಲವು ನಿಯಮಗಳನ್ನು ಅನುಸರಿಸುವಂತೆಯೂ ಸೂಚನೆ ನೀಡಲಾಗಿದೆ. ಆದರೆ, ಡೋಂಟ್ ಕೇರ್ ಎನ್ನುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳಕ್ಕೂ ಮುಂದಾಗಿದ್ದಾರೆ.
ಇದನ್ನೂ ಓದಿದ್ದೀರಾ? ಗುಡಿಬಂಡೆ | ನಿವೇಶನ ವಿವಾದ; ಯುವಕನಿಗೆ ಮಾರಕಾಸ್ತ್ರದಿಂದ ಹಲ್ಲೆ
“ಗೃಹಸಚಿವ ಪರಮೇಶ್ವರ್ ಅವರ ತವರು ಕ್ಷೇತ್ರದಲ್ಲೇ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದು, ತನ್ನ ಎಲ್ಲೆ ಮೀರಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೈಕ್ರೊ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿ ನೆಪದಲ್ಲಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬೇಕಾದರೆ ಎಸ್‌ಪಿಯವರು ಜಿಲ್ಲೆಯ ಎಲ್ಲ ಠಾಣೆಗಳಿಗೂ ಒಮ್ಮೆ ಭೇಟಿ ನೀಡಿ, ಪರಿಶೀಲಿಸಲಿ” ಎಂದು ದಲಿತ ಮುಖಂಡ ರಮೇಶ್ ಹಿರೇಕಟ್ಟೆ ಸವಾಲು ಹಾಕಿದ್ದಾರೆ.
ಈ ಮನುಷ್ಯ ರಾಜ್ಯಕ್ಕೂ ಲಾಭವಿಲ್ಲ.
ತನ್ನ ಸ್ವ ಕ್ಷೇತ್ರ ಕ್ಕೂ ಉಪಕಾರ ಇಲ್ಲ.
ಹೆಸರಿಗೆ ರಾಜ್ಯದ ಗೃಹಮಂತ್ರಿ.