ಗಾಂಧಿಯವರನ್ನು ವಿರೋಧಿಸುವ ಶಕ್ತಿಗಳು ಇಂದು ವಿಜೃಂಭಿಸುತ್ತಿವೆ. ಯುವಕರಲ್ಲಿ ಗಾಂಧೀಜಿ ಕುರಿತು ಹಲವು ಸುಳ್ಳುಗಳನ್ನು ಬಿತ್ತಲಾಗುತ್ತಿದೆ. ಇಂತಹ ವಿಷಮ ಪರಿಸ್ಥಿಯಲ್ಲಿ ಗಾಂಧಿಯನ್ನು ಯುವಜನತೆಗೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಲೇಖಕ ರವಿಕುಮಾರ್ ನೀಹ ಹೇಳಿದರು.
ತುಮಕೂರಿನ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ‘ಯುವಜನತೆಗೆ ಬೇಕಾದ ಗಾಂಧಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗಾಂಧಿಯ ಯುದ್ಧ ವಿರೋಧಿ ನೀತಿ, ಅಪರಿಗ್ರಹ, ಅಹಿಂಸೆಗಳು, ಜೀವ ಪರವಾದ ಸಮಾನತೆಯ ಆಶಯವುಳ್ಳ ಮಾನವೀಯ ಮೌಲ್ಯಗಳನ್ನೇ ಉಸಿರಾಡುತ್ತಿವೆ. ಇವುಗಳನ್ನು ಕುರಿತು ಯುವಜನತೆಗೆ ಅರಿವು ಮೂಡಿಸಬೇಕಿದೆ. ಗಾಂಧಿ ನಮಗೆ ಹಲವು ವಿಚಾರಗಳಲ್ಲಿ ಮುಖ್ಯವಾಗುತ್ತಾರೆ. ಅವರು ಸವೆಸಿದ ಹಾದಿ ಹಲವು ಪ್ರಯೋಗಗಳಿಂದ ಕೂಡಿದ್ದು, ಈ ಸತ್ಯದ ಪ್ರಯೋಗಗಳಿಂದಲೇ ಮೋಹನದಾಸರು ಗಾಂಧಿಯಾದದ್ದು. ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿರುವುದು, ಬುದ್ಧ, ಗಾಂಧಿ ಮತ್ತು ಅಂಬೇಡ್ಕರರ ಕಾರಣಕ್ಕಾಗಿ. ಗಾಂಧಿ ಒಂದು ವ್ಯಕ್ತಿಯಲ್ಲ, ಆಗುತ್ತಿರುವ ಕ್ರಿಯೆ. ಗಾಂಧಿಯವರ ಅಹಿಂಸೆ, ಅಪರಿಗ್ರಹ, ಸರಳ ಜೀವನ, ಸ್ವಚ್ಛತೆಯಂತಹ ವಿಚಾರಗಳು ಇಂದಿಗೆ ಹೆಚ್ಚು ಪ್ರಸ್ತುತ” ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, “ಇತ್ತೀಚೆಗೆ ಯುವಜನತೆ ಗಾಂಧಿಯವರಿಂದ ದೂರವಾಗುತ್ತಿದ್ದಾರೆ. ಇಡೀ ಮನುಕುಲಕ್ಕೆ, ಸರ್ವಕಾಲಕ್ಕೂ ಪ್ರಸ್ತುತವಾಗುವ ಚಿಂತನೆಗಳನ್ನು, ಸತ್ಯ, ಅಹಿಂಸೆ, ಪ್ರೀತಿಯಂತಹ ಸಶಕ್ತ ಮಾರ್ಗಗಳನ್ನು ಗಾಂಧೀಜಿ ನಮಗೆ ನೀಡಿದ್ದಾರೆ. ಗಾಂಧಿಯವರ ಬದುಕು ಪ್ರಕೃತಿ ಸಹಜವಾದದ್ದು. ಎಲ್ಲವನ್ನೂ ಸಮತೆಯಿಂದ, ಸಮಚಿತ್ತದಿಂದ ನೋಡುವುದನ್ನು ಗಾಂಧಿ ನಮಗೆ ಕಲಿಸಿದ್ದಾರೆ. ನಮಗೆ ಅವಕಾಶ ಸಿಕ್ಕಾಗಲೆಲ್ಲ ಮುಂದಿನ ತಲೆಮಾರಿಗೆ ಗಾಂಧಿಯವರನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಜಂಬೂಸವಾರಿ; 49 ಸ್ತಬ್ಧ ಚಿತ್ರಗಳ ಪ್ರದರ್ಶನ
ಕಾರ್ಯಕ್ರಮದಲ್ಲಿ ವೀರಣ್ಣ ಮಡಿವಾಳ, ಡಾ ಪ್ರಿಯಾಂಕ ಎಂ ಜಿ, ಮರಿಯಂಬೀ, ಗಾಯಕಿ ಪಾರ್ವತಮ್ಮ ರಾಜ್‌ಕುಮಾರ್, ಡಾ ರಜನಿ, ಡಾ ಮೂರ್ತಿ, ವಿಚಾರ ಮಂಟಪ ಬಳಗದ ವರುಣ್ ರಾಜ್, ನವೀನ್ ಕುಮಾರ್ ಪಿ ಆರ್, ಮುತ್ತುರಾಜು, ಸುರೇಶ್ ಮುಂತಾದವರ ಇದ್ದರು.