ಬಾಯಿಯ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳು ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ. ವಾಡಿಕೆಯ ಹಲ್ಲಿನ ಸಮಸ್ಯೆ ಅಥವಾ ನೆಗಡಿ ಎಂದು ತಪ್ಪಾಗಿ ಗ್ರಹಿಸಬಹುದು. ಒಂದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುವ ಅನೇಕ ಕ್ಯಾನ್ಸರ್ ಪರಿಸ್ಥಿತಿಗಳನ್ನು ಜನಸಾಮಾನ್ಯರು ಎದುರಿಸುತ್ತಿದ್ದಾರೆ. ಆದರೆ ವೈದ್ಯಕೀಯ ವೃತ್ತಿಪರರು ಮಾತ್ರ ಕ್ಯಾನ್ಸರ್ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆಯನ್ನು ನಿರ್ಧರಿಸಲು ಸಾಧ್ಯ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅಭಿಪ್ರಾಯಪಟ್ಟರು.
ತುಮಕೂರು ನಗರ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ದಂತ ಕಾಲೇಜಿನ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದಿಂದ ಅಂತರಾಷ್ಟ್ರೀಯ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ದಿನದಂದು ಹಮ್ಮಿಕೊಳ್ಳಲಾಗಿದ್ದ “ಬಾಯಿಯ ಕ್ಯಾನ್ಸರ್ ರೋಗದ ನಿರ್ಣಯ ಮತ್ತು ಶೀಘ್ರ ಪತ್ತೆ ಹಚ್ಚುವಿಕೆ ” ವಿಷಯ ಕುರಿತು ಮಾತನಾಡಿದ ಅವರು, ಬಾಯಿಯ ಕ್ಯಾನ್ಸರ್ ವಿಶ್ವದ ಆರನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಬಾಯಿಯ ಕ್ಯಾನ್ಸರ್ ಹರಡುವಿಕೆಯು ಮಹಿಳೆಯರಿಗಿಂತ ಪುರುಷರಲ್ಲಿ 3 ಪಟ್ಟು ಹೆಚ್ಚಾಗಿದೆ. ಮೌಖಿಕ ಹಾಗೂ ಗಂಟಲ ಕ್ಯಾನ್ಸರ್ ಬೇಹ ಪತ್ತೆಹಚ್ಚಲು ಈಗ ಆಧುನಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಜನಸಾಮಾನ್ಯರು ಭಯಪಡಬೇಕಾಗಿಲ್ಲ. ರೋಗ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಎಂದು ಡಾ.ಕೆ.ಬಿ.ಲಿಂಗೇಗೌಡ ಸಲಹೆ ನೀಡಿದರು.

ಆಂಕೊಲಾಜಿ ವಿಭಾಗದ ಶಸ್ತ್ರಚಿಕಿತ್ಸಕರಾದ ಡಾ.ದಿವ್ಯಾ “ಬಾಯಿಯ ಕ್ಯಾನ್ಸರ್ ರೋಗದ ನಿರ್ಣಯ ಮತ್ತು ಶೀಘ್ರ ಪತ್ತೆ ಹಚ್ಚುವಿಕೆ ” ವಿಷಯ ಕುರಿತು ಉಪನ್ಯಾಸ ನೀಡಿ, ದೇಹದ ಯಾವುದೇ ಜೀವಕೋಶಕ್ಕೆ ಪದೇಪದೇ ರೋಗಕಾರಕಗಳಿಂದ ಪ್ರಚೋದನೆಯಾಗುವುದೇ ಕ್ಯಾನ್ಸರ್ ಬರಲು ಮೂಲ ಕಾರಣ. ಮಾನವನ ಜೀವನಶೈಲಿಯಲ್ಲಿನ ಏರುಪೇರುಗಳಿಂದಾಗಿ ಈ ಪ್ರಚೋದಕಾರಕಗಳು ದೇಹದ ಜೀವಕೋಶಗಳ ಮೇಲೆ ಪದೇ ಪದೇ ಆಕ್ರಮಣ ನಡೆಸಿ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತಿಸುತ್ತವೆ ಎಂದರು.
ಸಾಹೇ ವಿವಿ ರಿಜಿಸ್ಟಾರ್ ಡಾ.ಅಶೋಕ ಮೆಹ್ತಾ, ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರವೀಣ್ ಬಿ ಕುಡ್ವ ,ಮೌಖಿಕ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ್ ಕುಮಾರ್ ಆರ್, ವಿಭಾಗದ ಡಾ.ವಿಷ್ಣುಪ್ರಿಯಾ, ಡಾ.ಚೇತನ, ಸ್ನಾತಕೋತ್ತರ ಪದವೀಧರರಾದ ಡಾ.ಶಿವಾನಿ, ಮಿಸ್ ಹರಿಪ್ರಿಯಾ ಅವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.