ಮಾಗಡಿ ತಾಲೂಕುಗಳಿಗೆ ಹೇಮಾವತಿ ನೀರಿ ತೆಗೆದುಕೊಂಡು ಹೋಗಲು ನಿರ್ಮಿಸುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೇನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು, ಜಿಲ್ಲೆಗೆ ನಿಗಧಿಯಾಗಿರುವ ನೀರನ್ನು ಸಂಪೂರ್ಣವಾಗಿ ಹರಿಸಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 07 ಶನಿವಾರ ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ,ಬೃಹತ್ ಪ್ರತಿಭಟನಾ ಧರಣಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿವೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಸಂಯುಕ್ತ ಹೋರಾಟದ ಸಿ.ಯತಿರಾಜು, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಎಕೆಐಎಸ್ ನ ಎಸ್.ಎನ್.ಸ್ವಾಮಿ, ಪ್ರಾಂತ ರೈತ ಸಂಘದ ಚನ್ನಬಸಣ್ಣ, ಅಜ್ಜಪ್ಪ, ಎಐಕೆಎಸ್ ನ ಕಂಬೇಗೌಡ ,ವೆಂಕಟೇಗೌಡ,ಮಹಿಳಾ ವಿಭಾಗದ ಜಯಮ್ಮ ಅವರುಗಳು, ಜಿಲ್ಲೆಯ ಜನಪ್ರತಿನಿಧಿಗಳು, ರೈತರ ಹಿತ ಮರೆತು,ಮತ ರಾಜಕೀಯದ ಮೇಲಾಟ ನಡೆಸುತ್ತಿದ್ದಾರೆ. ಹಾಗಾಗಿ ರೈತ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿವೆ ಎಂದರು.
ಸಂಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು,ತುಮಕೂರು ಶಾಖಾ ನಾಲೆಯಿಂದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ, ಮುಖ್ಯವಾಗಿ ರೈತರಿಗೆ ತೀವ್ರವಾದ ಆತಂಕವನ್ನು ಸರಕಾರ ಸೃಷ್ಟಿ ಮಾಡಿದೆ.ತುಮಕೂರು ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ತಾಲೂಕುಗಳ ರೈತರು ಮತ್ತು ನಾಗರಿಕರು ಕುಡಿಯುವ ನೀರಿಗೆ ನೀರಾವರಿಗೆ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹೇಮಾವತಿ ನೀರನ್ನು ನೆಚ್ಚಿಕೊಂಡೇ ಕೃಷಿ ಮತ್ತು ಬದುಕನ್ನು ರೂಪಿಸಿಕೊಂಡಿದ್ದಾರೆ. ಹೇಮಾವತಿಯ ನೀರಿನಿಂದ ಕೆರೆ ತುಂಬಿಸದಿದ್ದರೆ ಅದರ ಮೇಲೆ ಅವಲಂಬಿತವಾದ ತೆಂಗು, ಅಡಿಕೆ ಇನ್ನಿತರ ಬೆಳೆಗಳು ಸರ್ವನಾಶವಾಗುತ್ತವೆ. ಮಾಗಡಿಗೆ ಹೇಮಾವತಿ ನೀರು ಹರಿಸಲು ಯಾರಿಗೂ ಅಭ್ಯಂತರವಿಲ್ಲ. ಅದಕ್ಕಾಗಿ ತುಮಕೂರಿನ ರೈತರೂ ಸಹ ಹೋರಾಟಕ್ಕೆ ಕೈಜೋಡಿಸಲು ಸಿದ್ದ. ಆದರೆ ತುಮಕೂರಿನ ಶಾಖಾ ನಾಲೆಯಿಂದ ನೀರು ತೆಗೆದುಕೊಂಡು ಹೋಗುವುದರ ಬಗ್ಗೆಯಷ್ಟೇ ವಿರೋಧ. ಏಕೆಂದರೆ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಜಲ ಸಂಪನ್ಮೂಲ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ದಿನಾಂಕ: 11.07.2019 ರಂದು ತುಮಕೂರು ಹೇಮಾವತಿ ನಾಲಾ ವಲಯಕ್ಕೆ 25.31 ಟಿಎಂಸಿ ನೀರನ್ನು ನಿಗದಿಪಡಿಸಿ ಹೊಸದಾಗಿ ಕೆಲವು ಪ್ರದೇಶಗಳನ್ನು ಸೇರಿಸಿದ್ದಾರೆ. ಅದರಂತೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಆದರೆ ಇದುವರೆಗೂ ತುಮಕೂರು ನಾಲಾ ವಲಯಕ್ಕೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರು ದೊರಕಿಲ್ಲ. ಹಾಗಾದರೆ 25.31 ಟಿಎಂಸಿ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.ಆದ್ದರಿಂದ ತುಮಕೂರು ಜಿಲ್ಲೆಗೆ ಬರಬೇಕಾದ ನೀರಿನ ಹಂಚಿಕೆಯನ್ನು ಮೊದಲು ಖಚಿತಪಡಿಸ ಬೇಕು.ಆದಾಗದಿದ್ದರೆ ಲಿಂಕ್ ಕೆನಾಲ್ ನಿಂದ ನಿರ್ಮಾಣದಿಂದಾಗಿ ಜಿಲ್ಲೆಗೆ ಬರುವ ಅಲ್ಪಸ್ವಲ್ಪ ನೀರು ಭಾಗವಾಗಿ ಮಾಗಡಿಗೆ ಹರಿದು ಹೋಗಬಹುದೆಂದು ಆತಂಕವಾಗಿದೆ.ಈ ವಿಚಾರದಲ್ಲಿ ಸರಕಾರ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿ,ರೈತರ ಅನುಮಾನವನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೊಂವಿಂದರಾಜು ಮಾತನಾಡಿ, ಈಗಾಗಲೇ ಶಾಖಾ ನಾಲೆಯಿಂದ ಕುಣಿಗಲ್‌ರೆಗೂ ಹೇಮಾವತಿ ನೀರು ಹೋಗುತ್ತಿದೆ. ಇತ್ತೀಚಿಗೆ ಕೋಟ್ಯಾಂತರ ಹಣವನ್ನು ಮೂಲ ನಾಲೆಯ ಅಗಲೀಕರಣ ಮತ್ತು ನಾಲಾ ಅಭಿವೃದ್ಧಿ ಕೆಲಸ ನಡೆದಿದೆ. ಹಾಗಾಗಿ, ಅಲ್ಲಿಂದಲೇ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ಸುಲಭ ಮತ್ತು ಖರ್ಚೂ ಕಡಿಮೆ. ಆದರೆ ಅದಕ್ಕೆ ಬದಲಿಗೆ ಗುಬ್ಬಿಯಿಂದ ಹೊಸದಾಗಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮತ್ತೆ ಕೋಟ್ಯಾಂತರ ಹಣ ದುಂದುವೆಚ್ಚವಾಗುತ್ತದೆ ಮತ್ತು ರೈತರ ಭೂಮಿ ಸ್ವಾಹ ಆಗುತ್ತದೆ. ಅಂತಿಮವಾಗಿ ಇದರ ಹೊರೆ ಜನರ ಮೇಲೇ ಬೀಳುತ್ತದೆ.ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯ. ಜನರ ಬದುಕೇ ಪಣವಾಗಿರುತ್ತದೆ.ಅಂತಹ ವಿಷಯದಲ್ಲಿ ಸರಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ.ಜೊತೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸುವ ಅಪಾಯವೂ ಇದೆ. ಆದರೆ ಪ್ರಶ್ನೆಯೆಂದರೆ ತುಮಕೂರಿಗೆ ಅನ್ಯಾಯವಾಗಬಾರದು. ಪೈಪ್‌ಲೈನ್ ಜೋಡಣೆ ನಡೆಯುತ್ತಿರುವುದು ಸಂಘರ್ಷವೇರ್ಪಡುವ ಸಂಭವವಿದೆ. ಜೊತೆಗೆ ಎರಡೂ ಭಾಗಗಳ ರೈತರಿಗೆ, ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು. ಇಂತಹ ಸೂಕ್ತವಾದ, ಭಾವನಾತ್ಮಕವಾದ ಬದುಕಿನ ಪ್ರಶ್ನೆಯೊಂದಿಗೆ ಬೆರೆತಿರುವ ವಿಷಯವನ್ನು ಮತ ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಎಂದರು.

ಪ್ರಾಂತ ರೈತ ಸಂಘದ ಚನ್ನಬಸಣ್ಣ ಮಾತನಾಡಿ,ಇಷ್ಟೆಲ್ಲಾ ಹೋರಾಟಗಳು, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸರಕಾರವಾಗಲಿ, ತುಮಕೂರಿನ ಜನಪ್ರತಿನಿಧಿಗಳಾಗಲೀ ಮುಂದೆ ಬಂದು ಸಂಬಂಧಪಟ್ಟ ಸಂಘಟನೆಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಿತ್ತು. ಬದಲಿಗೆ ಮೌನ ವಹಿಸಿರುವುದು ದೊಡ್ಡ ದುರಂತ. ಕಳೆದ ಬಾರಿ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ – ನಡೆದ ಹೋರಾಟದ ಸಂದರ್ಭದಲ್ಲಿ ರೈತ ಸಂಘಟನೆಗಳ ಜೊತೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಅದು ಇದುವೆರೆಗೂ ಸಾಧ್ಯವಾಗಿಲ್ಲ.ಆದ್ದರಿಂದ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಹಂಚಿಕೆಯಾಗಿರುವ ಭಾಗಗಳಿಗೆ ಮೂಲ ನಾಲೆಯ ಮುಖಾಂತರವೇ ನೀರು ಹರಿಸುವ ಸಾಧ್ಯತೆಯಿದ್ದರೂ ದುಂದುವೆಚ್ಚ ಮಾಡಿ. ರೈತರ ಭೂಮಿಯನ್ನು ಕಿತ್ತುಕೊಂಡು, ರೈತ ಸಮುದಾಯಕ್ಕೆ ತೊಂದರೆ ನೀಡುವ, ತುಮಕೂರಿಗೆ ಹೇಮಾವತಿ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗುವ ಆವೈಜ್ಞಾನಿಕ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕೆಲಸವನ್ನು ನಿಲ್ಲಿಸಬೇಕು ಮತ್ತು ಪರಿಸ್ಥಿತಿ ಕೈಮೀರದಂತೆ ನೋಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ 2024ರ ಡಿಸೆಂಬರ್ 7 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿಯನ್ನು ನಡೆಸುತ್ತಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಧರಣಿಗೆ ಜಿಲ್ಲೆಯ ಎಲ್ಲಾ ನಾಗರಿಕರು, ಮುಖ್ಯವಾಗಿ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು
ಎಐಕೆಎಸ್ ನ ಕಂಬೇಗೌಡ ಮಾತನಾಡಿ, ಜನಪ್ರತಿನಿಧಿಗಳು ಹೋರಾಟ ನಡೆಸುತ್ತೇವೆ ಎಂದರೆ ಕರೆದು ಮಾತನಾಡುವ ಜಿಲ್ಲಾ ಉಸ್ಯುವಾರಿ ಸಚಿವರು, ಎಕ್ಸ್ಪ್ರೆಸ್ ಕೆನಾಲ್ ನಿಂದ ತಾವು ಪ್ರತಿನಿಧಿಸುವ ಕ್ಷೇತ್ರದ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿದಿದ್ದರು ಮೌನಕ್ಕೆ ಶರಣಾಗಿರುವುದು ದರಂತವೇ ಸರಿ.ಚಳಿಗಾಲದ ಅಧಿವೇಶನಲ್ಲಿ ಈ ಕುರಿತು ಎಲ್ಲಾ ಶಾಸಕರು ಪಕ್ಷ ಭೇಧ ಮರೆತು ಚರ್ಚೆ ನಡೆಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂತರೈತ ಸಂಘದ ಬಿ.ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
