ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಗೆ ಒತ್ತಾಯಿಸಿ ಬುಧವಾರ ತಡರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಬಿದರೆಹಳ್ಳ ಕಾವಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲವೆಂದು ರೀ ಬೋರ್ವೆಲ್ ಮಾಡಿಸಲಾಯಿತು. ಆದರೆ ಕೊಳವೆಬಾವಿಯಲ್ಲಿ ಬೋರ್ ವೆಲ್‌ನ ಯಂತ್ರೋಪಕರಣಗಳು ಕಳಚಿ ಬಿದ್ದ ಪರಿಣಾಮ ನೂತನ ಯಂತ್ರೋಪಕರಣಗಳನ್ನು ಬಿಡಲು ಆಗದೆ ಕುಡಿಯುವ ನೀರಿಗೆ ವಿಪರೀತ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆ ನೂತನ ಕೊಳವೆ ಬಾವಿ ಹಾಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಇಲ್ಲೇ ಕುಳಿತು ತೀವ್ರ ಸ್ವರೂಪದ ಪ್ರತಿಭಟನೆ ಮಾಡುತ್ತೇವೆ” ಎಂದು ಗ್ರಾಮಸ್ಥರು ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಫಣೀಂದ್ರಮುನಿ ಮಾತನಾಡಿ, “ಕಳೆದ ಒಂದು ತಿಂಗಳಿನಿಂದ ಬಿದರೆಹಳ್ಳ ಕಾವಲ್ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ. ಜನ-ಜಾನುವಾರುಗಳಿಗೂ ತೀವ್ರ ಸಮಸ್ಯೆಯಾಗಿದೆ. ಕೊಳವೆ ಬಾವಿಗೆ ರಿ ಬೋರ್ ವೆಲ್ ಮಾಡಿಸಿದರೂ ನೀರು ಬರುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ನೂತನ ಕೊಳವೆಬಾವಿ ಮಂಜೂರಾತಿ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ ಆರತಿ ಜನರ ಸಮಸ್ಯೆಯನ್ನು ಆಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, “ಈ ಹಿಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ಬಿದರಹಳ್ಳ ಕಾವಲ್ ಕೊಳವೆ ಬಾವಿಗೆ ಎಸ್‌ಡಿಆರ್‌ಎಫ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗೆ ರಿ ಬೋರ್‌ವೆಲ್ ಮಾಡಲು ಅನುಮೋದನೆ ನೀಡಲಾಗಿತ್ತು. ಈಗ ರಿ ಬೋರ್‌ವೆಲ್ ಮಾಡಿದರೂ ನೀರು ಬರುತ್ತಿಲ್ಲ. ಈ ಸಂಬಂಧ ಬಿದರೆಹಳ್ಳ ಕಾವಲ್ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕುಡಿಯುವ ನೀರನ್ನು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಬೂತ್ ಮತದಾರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ
“ನೂತನ ಕೊಳವೆ ಬಾವಿ ಕೊರೆಸುವುದರ ಬಗ್ಗೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ಪ್ರತಿಭಟನಾ ಸ್ಥಳದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಪರಮೇಶ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಟರಾಜು, ಪಿಎಸ್ಐ ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನುಜಾ ಬೆನಕಟ್ಟೆ ಇದ್ದರು.
