ಭೂಮಿ-ವಸತಿಗಾಗಿ ಧರಣಿ ನಡೆಸುತ್ತಿದ್ದ ದಲಿತ, ಅಲೆಮಾರಿ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದಿರುವ ಪೊಲೀಸ್ ದಬ್ಬಾಳಿಕೆಯನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಸ್ಥಾಪಕ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಪತ್ರ ಬರೆದಿದ್ದಾರೆ.
“ಕಳೆದ 16 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಪೊಲೀಸರು ಬಲಪ್ರಯೋಗ ಮಾಡಿ ಧರಣಿಕಾರರನ್ನು ಹತ್ತಿಕ್ಕುವ ಯತ್ನ ಮಾಡಲಾಗಿದೆ. ಈ ವೇಳೆ ಕೆಲವರನ್ನು ಊರ್ಡಿಗೆರೆ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಕನಿಷ್ಟ ತಲೆಮೇಲೊಂದು ಸೂರಿಗೆ ಪರದಾಡುತ್ತಿರುವ ನಿರ್ಗತಿಕ ನಾಗರಿಕರ ಧ್ವನಿಯನ್ನು ಹತ್ತಿಕ್ಕಲು ಈ ರೀತಿಯ ಕ್ರಮ ಕೈಗೊಂಡಿರುವುದು ಖಂಡನೀಯ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಈ ಸಮಸ್ಯೆಗಳು ಆಡಳಿತಾತ್ಮಕವಾಗಿ ಬಗೆಹರಿಸಬಹುದಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರಂತರವಾಗಿ ಸಮಸ್ಯೆಗಳು ಮುಂದುವರೆಐುತ್ತಲೇ ಇವೆ. ಮುಂಚಿನ ಹೋರಾಟಗಳ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದನ್ನು ಸ್ಮರಿಸಿಕೊಂಡು, ಇದೇ ರೀತಿ ಈ ಬಾರಿಯ ಸಮಸ್ಯೆಗೂ ಸೂಕ್ತ ಪರಿಹಾರ ನೀಡಬೇಕೆಂದು” ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರು | ಕಾರ್ಮಿಕರ ದಿನ, ಬಸವ ಜಯಂತಿ ಆಚರಿಸಿದ ವಿಶೇಷಚೇತನರ ʼಪ್ರೇರಣಾʼ
ಪತ್ರದ ಅಂತ್ಯದಲ್ಲಿ ನಾಗರಾಜ್ ಅವರು, ಬಂಧಿತರನ್ನು ಬಿಡುಗಡೆ ಮಾಡಿ, ಭೂಮಿ-ವಸತಿ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.