ʼಬಡತನ ನಿರ್ಮೂಲನೆʼ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಜಾರಿಗೆ ತಂದು, ಯಶಸ್ವಿಯಾಗಿ ಅನುಷ್ಟಾನಗೊಳಿಸುವ ಮೂಲಕ ರಾಜ್ಯದ ಬಡ ಜನರ ಬದುಕನ್ನು ಹಸನುಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕುಣಿಗಲ್ ನಗರದ ಜಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ಕುಣಿಗಲ್ ತಾಲ್ಲೂಕು ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಅನುಮೋದನೆಗೊಂಡ ವಿವಿಧ ಕಾಮಗಾರಿಗಳ ಅನಾವರಣ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಯುದ್ಧ ಮಾಡುತ್ತಿಲ್ಲ. ಬದಲಿಗೆ ಬಡತನದ ವಿರುದ್ಧ ಯುದ್ಧ ಮಾಡುತ್ತಿದೆ ಎಂದರು.
ರಾಜ್ಯದ ಅಭಿವೃದ್ದಿ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, 3ಲಕ್ಷ 74 ಸಾವಿರ ಕೋಟಿ ರೂ.ಗಳ ಪೈಕಿ 1ಲಕ್ಷ 25 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿ ಕೆಲಸಕ್ಕೆ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ಶಕ್ತಿ ತುಂಬಿದೆ. ನಮ್ಮ ಗ್ಯಾರಂಟಿ ಯೋಜನೆಗಳು 420 ಅಥವಾ ಡೂಪ್ಲಿಕೇಟ್ ಯೋಜನೆಗಳಲ್ಲ. ಬದಲಿಗೆ ಯಶಸ್ವಿಯಾಗಿ ಅನುಷ್ಟಾನಗೊಂಡಿರುವ ಯೋಜನೆಗಳಾಗಿವೆ ಎಂದು ತಿಳಿಸಿದರು.
ಕುಣಿಗಲ್ ತಾಲ್ಲೂಕಿಗೆ 1 ಸಾವಿರ ಕೋಟಿ ರೂ.ಗಳನ್ನು ಕುಡಿಯುವ ನೀರಿಗಾಗಿ ಮಂಜೂರು ಮಾಡುವ ಮೂಲಕ ಹೇಮಾವತಿ ನೀರನ್ನು ಕ್ಷೇತ್ರಕ್ಕೆ ಹರಿಸಿ ಕೆರೆಗಳಿಗೆ ನೀರನ್ನು ತುಂಬಿಸಿ ಜನತೆಗೆ ಕುಡಿಯುವ ನೀರನ್ನು ಒದಗಿಸುವ ಕೆಲಸವನ್ನು ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ರಂಗನಾಥ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 350 ಕೋಟಿ ರೂ.ಗಳನ್ನು ವ್ಯಯಿಸುವ ಮೂಲಕ ಪ್ರತಿ ರೈತ ಕುಟುಂಬಕ್ಕೆ ವಿದ್ಯುತ್ ಟ್ರಾನ್ಸ್ಫಾರ್ಮನ್ನು ನೀಡಲಾಗಿದ್ದು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜನತೆ ಕಾಣುತ್ತಿದ್ದಾರೆ. ಕುಣಿಗಲ್‌ನ ಇಂದಿನ ಕಾರ್ಯಕ್ರಮದಲ್ಲಿ 36 ಅಡಿಗಲ್ಲುಗಳಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಇದಕ್ಕೆ ಒಂದು ಉದಾಹರಣೆ ಎಂದರು.
ನಮ್ಮ ಸರ್ಕಾರ ಜನಪರ ಸರ್ಕಾರವಾಗಿದ್ದು, ರಾಜ್ಯದ ಜನತೆಗೆ 5 ಗ್ಯಾರಂಟಿಗಳ ಜೊತೆಗೆ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಕಳೆದ ೯ ತಿಂಗಳಲ್ಲಿ ಮಾಡಿದ್ದೇವೆ. ಜನರ ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಸರ್ಕಾರದ ಮೂಲ ಧ್ಯೇಯವಾಗಿದೆ ಎಂದು ಹೇಳಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಹೇಮಾವತಿ ಲಿಂಕ್ ಕಾಲುವೆಯನ್ನು ಕುಣಿಗಲ್ ತಾಲ್ಲೂಕಿಗೆ ತರುವ ವಿವಿಧ ಹಂತದಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸುವುದಾಗಿ ತಿಳಿಸಿದ ಅವರು, 885 ಕೋಟಿ ರೂ. ವೆಚ್ಚದ 34.5ಕಿ.ಮೀ. ಉದ್ದದ ಕುಣಿಗಲ್ ಎಕ್ಸ್ಪ್ರೆಸ್ ಕಾಲುವೆಯಿಂದಾಗಿ ತಾಲೂಕಿನ ಎಲ್ಲಾ ಕೆರೆಗಳು ತುಂಬುತ್ತವೆ ಎಂದರು.
ಕುಣಿಗಲ್ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ 40 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಯೋಜನೆ ಟೆಂಡರ್ ಹಂತದಲ್ಲಿರುತ್ತದೆ ಮತ್ತು ತಾಲ್ಲೂಕಿನ ಜನತೆಗೆ 10 ಸಾವಿರ ನಿವೇಶನಗಳನ್ನು ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 1000 ನಿವೇಶಗಳನ್ನು ಶಾಸಕ ಡಾ: ರಂಗನಾಥ್ ಅವರ ನೇತೃತ್ವದಲ್ಲಿ ರಚಿಸಲಾಗಿದೆ. ಇನ್ನು 2000 ನಿವೇಶನಗಳಿಗೆ ತಾಲ್ಲೂಕು ಆಡಳಿತ ಜಮೀನು ಗುರುತಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ, ಭಾಗ್ಯಲಕ್ಷಿ ಸೇರಿದಂತೆ ವಿವಿಧ ಇಲಾಖೆಗಳ ಸವಲತ್ತುಗಳ ಫಲಾನುಭವಿಗಳಿಗೆ ಉಪ ಮುಖ್ಯಮಂತ್ರಿಗಳು ಚೆಕ್ ವಿತರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಶಾಸಕ ಡಾ: ರಂಗನಾಥ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ರೆಹಿಮ್ ಖಾನ್, ಪಾವಗಡ ಶಾಸಕ ವೆಂಕಟೇಶ್, ಮಾಜಿ ಶಾಸಕ ವೆಂಕಟರಮಣಪ್ಪ ಸೇರಿದಂತೆ ಇತರೆ ಜನಪ್ರತಿನಿಧಿಗಳು ಗಣ್ಯರು ಉಪಸ್ಥಿತರಿದ್ದರು.