ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬರುತ್ತಿದ್ದ ಭಜರಂಗದಳ ಮುಖಂಡ ಪುತ್ತೂರಿನ ಮುರಳಿಕೃಷ್ಣ ಅಸಂತಡ್ಕಅವರನ್ನು ಪೊಲೀಸರು ಬಂಧಿಸಿದ ಕ್ರಮ ಖಂಡಿಸಿ, ಜಿಲ್ಲಾಧಿಕಾರಿಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬುಧವಾರ (ಮಾ.6) ಜಿಲ್ಲಾಧಿಕಾರಿಕಚೇರಿ ಬಳಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಬಿಜೆಪಿಯ ಮುಖಂಡರು ಭಾಗವಹಿಸಿದ್ದ ಈ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಪುತ್ತೂರಿನಿಂದ ಆಗಮಿಸುತ್ತಿದ್ದ ಭಜರಂಗದಳ ರಾಜ್ಯ ಸಹಸಂಯೋಜಕ್ ಮುರಳಿಕೃಷ ಅಸಂತಡ್ಕಅವರನ್ನು ಪೊಲೀಸರು ಕುಣಿಗಲ್ ಬಳಿ ಬಂಧಿಸಿದ್ದರು. ಸಕಾರಣವಿಲ್ಲದೆ ಮುರಳಿಕೃಷ್ಣರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನಾಕಾರರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಡುಗಡೆಗೆ ಒತ್ತಾಯಿಸಿದರು.
ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗುತ್ತಿದೆ. ದೇಶವಿರೋಧ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾಗಿದ್ದರಾಜ್ಯಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಾ ಪೋಷಿಸಿತ್ತಿದೆ ಎಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಭಜರಂಗದಳದ ಮುಖಂಡ ಮುರಳಿಕೃಷ್ಣರನ್ನು ಪೊಲೀಸರು ಬಂಧಿಸಿದ ಕ್ರಮಖಂಡನೀಯ, ಅವರನ್ನುತಕ್ಷಣ ಬಿಡುಗಡೆ ಮಾಡಬೇಕುಎಂದು ಒತ್ತಾಯಿಸಿದರು.
ಪಾಕಿಸ್ತಾನ ಪರಘೋಷಣೆ ಕೂಗುವವರನ್ನು ವಿಧಾನಸೌಧದ ಒಳಗೆ ಬಿಡುತ್ತಾರೆ. ಅವರನ್ನು ಬಂಧಿಸಲು ಮೀನಾಮೇಷ ಎಣಿಸುವ ಪೊಲೀಸರು, ರಾಜ್ಯಕಾಂಗ್ರೆಸ್ ಸರ್ಕಾರ ಮುರಳಿಕೃಷ್ಣರನ್ನು ಬಂಧಿಸಿ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶ ವಿರೋಧಿಗಳಿಗೆ ಕಾಂಗ್ರೆಸ್ ಸರ್ಕಾರ ಮೃದುಧೋರಣೆ ತಳೆದಿದೆ, ವೋಟಿನ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನವರು ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಾ ರಾಜ್ಯವನ್ನು ಭಯೋತ್ಪಾದಕರ ತಾಣ ಮಾಡಲು ಹೊರಟಿದ್ದಾರೆ. ಇದೇ ಕಾರಣಕ್ಕೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಡರಾದ ಎಸ್.ಶಿವಪ್ರಸಾದ್, ವೈ.ಎಚ್. ಹುಚ್ಚಯ್ಯ, ಎಚ್.ಎನ್. ಚಂದ್ರಶೇಖರ್, ಎಚ್.ಟಿ.ಭೈರಪ್ಪ, ಭೈರಣ್ಣ, ಜಿ.ಕೆ.ಶ್ರೀನಿವಾಸ್, ಟಿ.ಆರ್.ಸದಾಶಿವಯ್ಯ, ರುದ್ರೇಶ್, ಹನುಮಂತರಾಜು, ನವಚೇತನ್, ಎಚ್.ಎಂ. ರವೀಶಯ್ಯ, ಸಂದೀಪ್‌ಗೌಡ, ಜಗದೀಶ್, ಬೆಳ್ಳಿ ಲೋಕೇಶ್, ಬಾವಿಕಟ್ಟೆ ನಾಗಣ್ಣ, ಸಿ.ಎನ್.ರಮೇಶ್, ವಿಷ್ಣುವರ್ಧನ್, ಸತ್ಯಮಂಗಲ ಜಗದೀಶ್, ಗಣೇಶ್, ಲತಾ ಬಾಬು, ಶಕುಂತಲಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.