ತುಮಕೂರು ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನೌಕರರಿಗೆ ಸುಪ್ರಿಂಕೋರ್ಟಿನ 4-11-2022ರ ತೀರ್ಪಿನ ಅನ್ವಯ ಇಪಿಎಫ್ ಪ್ರಾದೇಶಿಕ ಕಚೇರಿಯಿಂದ ಪಿಂಚಿಣಿ ನಿಗದಿಗೊಳಿಸಬೇಕು. ಅಲ್ಲದೇ, ಈಗಾಗಲೇ ಹಣ ಕಟ್ಟಿಸಿಕೊಂಡಿರುವ ನೌಕರರಿಗೆ ಪಿಂಚಿಣಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಇಪಿಎಫ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವನ ಗೌಡ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ.ಡಿ.ಎಸ್ ನೇತೃತ್ವದಲ್ಲಿ ನೂರಾರು ನಿವೃತ್ತ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ಮನವಿ ಸಲ್ಲಿಸಿದ ನಂತರ, ಶಿರಾಗೇಟ್‌ನಲ್ಲಿ ಪ್ರಾದೇಶಿಕ ಇಪಿಎಫ್ ಕಚೇರಿ ಬಳಿ ತೆರಳಿ ಧರಣಿ ಆರಂಭಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ನಿವೃತ್ತ ನೌಕರರನ್ನು ಉದ್ದೇಶಿಸಿ ಮಾತನಾಡಿದ ಸಂಘ ಅಧ್ಯಕ್ಷ ಕೆ.ಬಸವನಗೌಡ, “2022ರ ನವೆಂಬರ್ 4ರ ಸುಪ್ರಿಂಕೋರ್ಟಿನ ತೀರ್ಪಿನಂತೆ ನಿವೃತ್ತ ನೌಕರರ ಹೆಚ್ಚಿನ ಪಿಂಚಿಣಿಗಾಗಿ ಸಾಲ, ಸೂಲ ಮಾಡಿ, ಇಪಿಎಫ್ ಅಧಿಕಾರಿಗಳು ನಿಗದಿ ಪಡಿಸಿದ ಹಣವನ್ನು ಕಟ್ಟಿ ಒಂದು ವರ್ಷ ಕಳೆದರೂ ಕೆಲವರಿಗೆ ಮಾತ್ರ ಪಿಂಚಿಣಿ ನಿಗದಿ ಪಡಿಸಿ, ಅವರ ಖಾತೆಗೆ ಜಮೆಯಾಗುತ್ತಿದೆ. ಹಣಕಟ್ಟಿರುವ ಸುಮಾರು 21 ಜನರಿಗೆ ಇದುವರೆಗೂ ಯಾವುದೇ ರೀತಿಯ ಪಿಂಚಿಣಿ ಬಂದಿಲ್ಲ. ಹೆಚ್ಚಿನ ಪಿಂಚಿಣಿ ಆಸೆಗೆ ಸರಕಾರಕ್ಕೆ 1.39 ಕೋಟಿ ಹಣ ಕಟ್ಟಿ ವರ್ಷ ಕಳೆದರೂ ಪಿಂಚಿಣಿ ನಿಗದಿ ಮಾಡದೇ ಕಾಲಹರಣ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಈ ಕೂಡಲೇ ನಮಗೆ ನ್ಯಾಯಯುತವಾಗಿ ದೊರೆಯಬೇಕಾದ ಪಿಂಚಿಣಿ ನೀಡಬೇಕು. ಹಾಗೂ ಸರಕಾರ ನಿಗದಿ ಮಾಡಿ ಹಣ ಕಟ್ಟದ ನೌಕರರು ಹಣ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ” ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ.ಡಿ.ಎಸ್. ಮಾತನಾಡಿ, “ತುಮಕೂರು ಹಾಲು ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ 391 ನೌಕರರು ಇದುವರೆಗೂ ನಿವೃತ್ತರಾಗಿದ್ದು, 107 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. 28 ಜನರು ಪಿಂಚಿಣಿಗಾಗಿ ಸುಪ್ರಿಂಕೋರ್ಟಿನ ಆದೇಶದಂತೆ ಸುಮಾರು 1.39 ಕೋಟಿ ಹಣ ಕಟ್ಟಿದ್ದಾರೆ. ಇವರಲ್ಲಿ ಕೇವಲ 7 ಜನರಿಗೆ ಮಾತ್ರ ಪಿಂಚಿಣಿ ನಿಗದಿಯಾಗಿ ಹಣ ಬರುತ್ತಿದೆ. ಉಳಿದ 231 ಜನರಿಗೆ ವರ್ಷವಾದರೂ ಕಟ್ಟಿದ ಹಣವೂ ಇಲ್ಲ. ಹೆಚ್ಚುವರಿ ಪಿಂಚಿಣಿಯೂ ಇಲ್ಲದಂತಾಗಿದೆ. ರಾಜ್ಯದ 14 ಬೇರೆ ಬೇರೆ ಹಾಲು ಒಕ್ಕೂಟದಲ್ಲಿ ಇದೇ ರೀತಿ ಇಪಿಎಫ್‌ಗಾಗಿ ಹಣ ಕಟ್ಟಿದ ನಿವೃತ್ತ ನೌಕರರಿಗೆ ಪಿಂಚಣಿ ನಿಗದಿಪಡಿಸಿ ನೀಡಲಾಗುತ್ತಿದೆ. ಆದರೆ ತುಮಕೂರು ಪ್ರಾದೇಶಿಕ ಕಚೇರಿಯಲ್ಲಿ ಮಾತ್ರ ತೀವ್ರ ನಿರ್ಲಕ್ಷ ನೀತಿ ಅನುಸರಿಸುತ್ತಿದ್ದಾರೆ” ಎಂದು ದೂರಿದರು.
“ನೌಕರರು ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿದರೆ ಹಾರಿಕೆಯ ಉತ್ತರ ನೀಡುವುದಲ್ಲದೆ, ನಿವೃತ್ತ ನೌಕರರನ್ನು ಗುಲಾಮರಂತೆ ವರ್ತಿಸುತ್ತಾರೆ. ಹಾಗಾಗಿ ಇಪಿಎಫ್ ಪ್ರಾದೇಶಿಕ ಕಚೇರಿಯವರು ನಮಗೆ ಪಿಂಚಣಿ ನಿಗದಿ ಮಾಡಿ ಹಣ ಬಿಡುಗಡೆ ಮಾಡುವವರೆಗೂ ಇಪಿಎಫ್ ಕಚೇರಿ ಮುಂಭಾಗದಿಂದ ತೆರಳದಿರಲು ನಾವೆಲ್ಲರೂ ನಿರ್ಧರಿಸಿದ್ದೇವೆ” ಎಂದರು.
ನಿವೃತ್ತ ನೌಕರರಾದ ಪಿ.ಮಾರುತಿರಾವ್, ಗುರುವಯ್ಯ ಎಂ.ಗೌಡ ಅವರುಗಳು ಪಿಂಚಣಿ ಹೋರಾಟ ಕುರಿತು ಮಾತನಾಡಿದರು.
ಪ್ರತಿಭಟನೆಯಲ್ಲಿ ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಡಿ.ಬಸವರಾಜು,ಹನುಮಂತರಾಯ.ಜಿ.ಎನ್., ಸಿ.ಶ್ರೀಧರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
