ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಎಸ್‌ಸಿ, ಎಸ್‌ಟಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆಗೆ ಬೆಸತ್ತು ಹಾಸ್ಟೆಲ್‌ಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ (ನ.6) ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ವಿವಿ ಮುಂಭಾಗ ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ವಿವಿ ಕುಲಪತಿಗಳು ಬಾರದ ಹಿನ್ನೆಲೆ ಬೆಸರಗೊಂಡ ವಿದ್ಯಾರ್ಥಿಗಳು ಡಿಸಿ ಕಚೇರಿಗೆ ರಾತ್ರಿಯೇ ತೆರಳಲು ಮುಂದಾದರು. ಡಿಸಿ ಕಚೇರಿಗೆ ತೆರಳುವ ಮಧ್ಯೆ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಎಸ್‌ಪಿ ಅಶೋಕ್ ಕೆ.ವಿ ವಿದ್ಯಾರ್ಥಿಗಳನ್ನು ತಡೆದು ಪ್ರತಿಭಟನೆಯನ್ನು ಶಾಂತಗೊಳಿಸಿದರು.
ಡಿಸಿ ಹಾಗೂ ಕುಲಪತಿಗಳೊಂದಿಗೆ ನಾಳೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ನಿಲಯಕ್ಕೆ ವಾಪಾಸ್ ತೆರಳಿದರು. ಪ್ರತಿಭಟನೆ ನಡೆದರೂ ಕಿವಿಗೊಡದ ವಿವಿ ಆಡಳಿತ ಮಂಡಳಿ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ಡಿಸಿ ಕಚೇರಿಗೆ ತೆರಳಲು ಮುಂದಾದರೂ ಸ್ಥಳೀಯ ಠಾಣೆ ಪೊಲೀಸರಿಗೆ ಮಾಹಿತಿಯೇ ಇರಲಿಲ್ಲ.
ಹಾಸ್ಟೆಲ್‌ನಲ್ಲಿ 250ವಿದ್ಯಾರ್ಥಿಗಳಿದ್ದು ಕೇವಲ 8 ಶೌಚಾಲಯಗಳಿವೆ. ಶೌಚಾಲಯಗಳ ಬಾಗಿಲುಗಳು ಮುರಿದು ಹೋಗಿವೆ. ಅದರ ದುರಸ್ತಿ ಕಾರ್ಯ ಮಾತ್ರ ಆಗಿಲ್ಲ. ಶೌಚದ ಪಿಟ್ ಗುಂಡಿಗಳು ತುಂಬಿ ಉಕ್ಕಿ ವಾಸನೆ ಬೀರುತ್ತಿದೆ. ಇದರಿಂದ ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ರೋಗದ ಭೀತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿದಿನ ಮೆನು ಪ್ರಕಾರ ಊಟ ನೀಡುವುದಿಲ್ಲ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಬಳಸಿ ಊಟ ತಯಾರಿಸುತ್ತಾರೆ. ಕೆಮಿಕಲ್ ಮಿಶ್ರಿತ ಅಡುಗೆ ಎಣ್ಣೆ ಉಪಯೋಗ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯ ಕೆಡುತ್ತಿದೆ. ವಿದ್ಯಾರ್ಥಿಗಳಿಗೆ ಗಂಟಲು ಮತ್ತು ಚರ್ಮ ಸಮಸ್ಯೆ ಕಾಡುತ್ತಿದೆ. ಪೌಷ್ಠಿಕ ಆಹಾರ ಸಿಗದೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಲೇಬಲ್ ಇಲ್ಲದ ಅಕ್ಕಿ ಚೀಲ, ಸಣ್ಣ ಗಾತ್ರದ ಕೊಳೆತ ತರಕಾರಿ ಬಳಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಪೌಷ್ಠಿಕತೆ ಕಾಡುತ್ತಿದೆ. ನಮ್ಮ ಸಮಸ್ಯೆ ಕೇಳೋರಿಲ್ಲ. ಈ ಕುರಿತು ಹಾಸ್ಟೆಲ್ ವಾರ್ಡನ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಹಾಸ್ಟೆಲ್ ನಿರ್ವಹಣೆ ಹೊತ್ತಿರುವ ಡಾ. ಚಿಕ್ಕಣ್ಣ ಅವರು ಜವಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬೆಳಗಿನ ನಿತ್ಯಕರ್ಮಕ್ಕೆ 250ಮಂದಿ ವಿದ್ಯಾರ್ಥಿಗಳಿಗೆ ಕೇವಲ 8 ಶೌಚಾಗೃಹಗಳಿದ್ದೂ ಶೌಚಾಗೃಹ ಇಡೀ ಹಾಸ್ಟೆಲ್ ವ್ಯವಸ್ಥೆಗೆ ಕನ್ನಡಿಹಿಡಿದಂತಿದೆ ಎಂದು ವಿದ್ಯಾರ್ಥಿಗಳು ದೂರಿದರು. ಪ್ರತಿಭಟನೆಯಲ್ಲಿ ವಿವಿ ಹಾಸ್ಟೆಲ್ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.