ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸಿಸುತ್ತಿರುವ ಹಂದಿ ಜೋಗಿ ಸಮುದಾಯ, ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯ ಸೇರಿದಂತೆ ಹಲವು ಜಾತಿ-ಜನಾಂಗದ ಜನರು ಸ್ವಂತ ನಿವೇಶನ ಹಾಗೂ ಭೂಮಿ ಹಕ್ಕು ಪತ್ರಗಳಿಲ್ಲದೆ ನಿರ್ಗತಿಕಾರಾಗಿ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ನಿವೇಶನ ಹಂಚಿಕೆ ಮಾಡಿ, ವಸತಿ ನೀಡಿ, ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ. ತುಮಕೂರಿನಲ್ಲಿ ಸಮಿತಿಯ ನೇತೃತ್ವದಲ್ಲಿ ಸಮುದಾಯಗಳ ಜನರು ಧರಣಿ ನಡೆಸುತ್ತಿದ್ದು, ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಜೂನ್ 18ರಿಂದ ಮಧುಗಿರಿ ತಾಲೂಕಿನ ಜನಕಲೋಟಿ, ತಿಗಳರಹಳ್ಳಿ, ಐಡಿಹಳ್ಳಿ, ವಿರುಪಗೊಂಡನಹಳ್ಳಿ, ಬ್ಯಾಲ್ಯ ಹಾಗೂ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ, ಹುಲಿಕುಂಟೆ ಗ್ರಾಮ, ಇರಕಸಂಸ್ರ ಕಾಲೋನಿ, ಓಬನಹಳ್ಳಿ ಮತ್ತು ತುಮಕೂರು ತಾಲೂಕಿನ ಅಮಲಾಪುರ, ಗಂಗಸಂದ್ರ, ಕೌತಮಾರನಹಳ್ಳಿಯ ನಿವೇಶನ ರಹಿತ ಸಂತ್ರಸ್ತರು ಕುಟುಂಬಗಳು ಧರಣಿ ನಡೆಸುತ್ತಿದ್ದಾರೆ.
“ನಿವೇಶನಗಳನ್ನು ಒದಗಿಸಿಕೊಡುವಂತೆ ಹಲವು ಬಾರಿ ಪ್ರತಿಭಟನೆಗಳನ್ನು ನಡೆದರೂ ಸರ್ಕಾರ ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಮೂಲಭೂತ ಸೌಲಭ್ಯಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಆದರೆ, ಜಿಲ್ಲಾಡಳಿತವು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ” ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಚಿಕ್ಕ ಪೆಂಡಾಲ್‌ನಲ್ಲಿಯೇ 100 ಜನ ಕುಳಿತು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪೆಂಡಾಲ್ ಕಂಬಿಗಳಿಗೆ ಜೋಕಾಲಿ ಹಾಕಿ ಎಳೆ ಕಂದಮ್ಮಗಳೊಂದಿಗೆ ತಾಯಂದಿರು ಕೂಡ ಧರಣಿಯಲ್ಲಿದ್ದಾರೆ. ಮಳೆ, ಗಾಳಿಗೂ ಜಗ್ಗದೆ ಪ್ರತಿಭಟಿಸುತ್ತಿದ್ದಾರೆ. ಆರೂ, ಅವರ ಹೋರಾಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅವರ ಅಳಲನ್ನು ಕೇಳುತ್ತಿಲ್ಲ.