ಸರ್ಕಾರಿ ಕಂದಾಯ ಭೂಮಿಯನ್ನು ಯಾವುದೇ ಭೌತಿಕ ಪರಿಶೀಲನೆ ನಡೆಸದೆ, ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂಆರ್‌ಗಳನ್ನು ರದ್ದುಪಡಿಸಬೇಕು. ಪೊಲೀಸ್ ಕಾವಲಿನಲ್ಲಿ ಗಿಡ ನೆಡುವ ಕಾಮಗಾರಿಯನ್ನು ನಿಲ್ಲಿಸಬೇಕು. ದೌರ್ಜನ್ಯ-ದಬ್ಬಾಳಿಕೆ ಮೂಲಕ ಬಗರ್ ಹುಕಂ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಿಲ್ಲಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಅವರು ಎಚ್ಚರಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಗಂಗಯ್ಯನಪಾಳ್ಯದಲ್ಲಿ ರೈತರ ಬಗರ್ ಹುಕುಂ ಭೂಮಿಗೆ ಅರಣ್ಯ ಇಲಾಖೆಯವರು ನಡೆಸಿರುವ ಅತಿಕ್ರಮ ಪ್ರವೇಶ ಖಂಡಿಸಿ ರೈತರು ನಡೆಸುತ್ತಿರುವ ಮೂರನೇ ದಿನದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಅರಣ್ಯ ಇಲಾಖೆಯ ಕಾನೂನುಬಾಹಿರ ಕೆಲಸಕ್ಕೆ ಸುಮಾರು 400 ಮಂದಿ ಪೊಲೀಸರ ಕಾವಲು ಕಾನೂನುಬದ್ಧ ರೈತರ ಹಕ್ಕುಗಳ ಮೇಲೆ ದಾಳಿಯಾಗಿದೆ. ಬಗರ್ ಹುಕಂ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿರುವ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ, ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಕಾನೂನುಬಾಹಿರ” ಎಂದು ಆರೋಪಿಸಿದರು.
“ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು ಐದು ತಿಂಗಳ ಹಿಂದೆ ಅರಣ್ಯ ಇಲಾಖೆ ಅತಿಕ್ರಮ ವಿರೋಧಿಸಿದ ರೈತರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆದಿದ್ದು, ಹತ್ತಾರು ರೈತರು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಗಂಗಯ್ಯನಪಾಳ್ಯದ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾದ ಬಳಿಕ ಜಿಲ್ಲಾಧಿಕಾರಿ ಸೂಚನೆಯಂತೆ ಬಗರ್ ಹುಕಂ ಭೂಮಿ ತಂಟೆಗೆ ಬರುವುದಿಲ್ಲವೆಂದು ಹೇಳಿದ್ದ ಅರಣ್ಯ ಇಲಾಖೆಯವರು ಮತ್ತೆ ತಮ್ಮ ಮಾತು ಉಲ್ಲಂಘಿಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗಂಗಯ್ಯನಪಾಳ್ಯದ ರೈತರ ಭೂಮಿ ವಿವಾದವನ್ನು ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಲಿಖಿತ ಮನವಿ ಮಾಡಿದ್ದರೂ, ಪೊಲೀಸ್ ಬಲ ಬಳಸಿ ದೌರ್ಜನ್ಯ ನಡೆಸುವುದು ನಾಗರಿಕ ಸರ್ಕಾರಕ್ಕೆ ಸೂಕ್ತವಾದುದ್ದಲ್ಲ. ವಿವಾದ ಪರಿಹಾರವಾಗುವ ತನಕ ಯಾವುದೇ ರೀತಿಯ ಕಾಮಗಾರಿ ಕೈಗೊಳ್ಳದಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಅರಣ್ಯ ಇಲಾಖೆಗೆ ಸೂಚಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ಕಾಲುವೆ ಸಂಖ್ಯೆ 76/5ರ ವ್ಯಾಪ್ತಿಗೆ ನೀರು ಹರಿಸುವಂತೆ ರೈತರ ಆಗ್ರಹ
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆರ್ ಎಸ್ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ಸಿ ಅಜ್ಜಪ್ಪ, ದೂಡ್ಡನಂಜಯ್ಯ, ನರಸಿಂಹಮೂರ್ತಿ, ನಾಗರಾಜು, ರಾಜಮ್ಮ, ಎನ್ ಕೆ ಸುಬ್ರಹ್ಮಣ್ಯ ಸೇರಿದಂತೆ ಬಹುತೇಕರು ಇದ್ದರು.