ತೆಂಗು ಬೆಳೆಯನ್ನು ಮೊದಲಿನಿಂದಲೂ ಯಾವುದೇ ರೀತಿಯ ಗೊಬ್ಬರವನ್ನು ಬಳಸದೆ ಬೆಳೆಸಿಕೊಂಡು ಬರಲಾಗುತ್ತಿದೆ. ಆದರೆ ಇತರೆ ಬೆಳೆಗಳಿಗೆ ನೀಡುವಂತೆ ತೆಂಗಿನ ಬೆಳೆಗೂ ಕೂಡ ಅವಶ್ಯಕ ಪೋಷಕಾಂಶಗಳನ್ನು ಒದಗಿಸಬೇಕು ಎಂದು ಶಿರಾ ಶಾಸಕ ಟಿ ಬಿ ಜಯಚಂದ್ರ ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಶಿರಾ ತಾಲೂಕಿನ ಮುದುಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಆಯೋಜಿಸಿದ್ದ ತೆಂಗು ಸಂಯೋಜಿತ ಬೇಸಾಯ ಯೋಜನೆಯಡಿಯಲ್ಲಿ ತೆಂಗು ಬೆಳೆಗಾರರಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಜಿಲ್ಲೆಯ ಕೆಲವು ಭಾಗಗಳಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ತೆಂಗು ಬೆಳೆಯಲ್ಲಿ ಅನೇಕ ರೀತಿಯ ರೋಗಗಳು ಕಾಣಿಸಿಕೊಂಡು ತೆಂಗು ಬೆಳೆಯು ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ತೆಂಗು ಬೆಳೆಯನ್ನು ಸಂರಕ್ಷಿಸಲು ರೈತರಿಗೆ ಪೋಷಕಾಂಶಗಳುಳ್ಳ ಗೊಬ್ಬರವನ್ನು ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
“ರೈತರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಕುರಿತು ರೈತರಿಗೆ ಸರಿಯಾದ ಮಾಹಿತಿ ದೊರಕದೆ ಸವಲತ್ತುಗಳನ್ನು ಪಡೆದುಕೊಳ್ಳುವುದರಲ್ಲಿ ಹಿಂದೆ ಉಳಿಯುತ್ತಿರುವುದರಿಂದ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ರೈತರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಬೇಕು” ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, “ಶಿರಾ ತಾಲೂಕಿನಲ್ಲಿ 11,821 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಈ ಯೋಜನೆಯಿಂದ 2,346 ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಾಂಕೇತಿಕವಾಗಿ ಈ ಪೋಷಕಾಂಶ ಗೊಬ್ಬರಗಳನ್ನು ವಿತರಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ತೆಂಗು ಬೆಳೆಗಾರರಿಗೆ ಗೊಬ್ಬರಗಳನ್ನು ವಿತರಿಸಲಾಗುತ್ತದೆ” ಎಂದು ತಿಳಿಸಿದರು.
“ಪ್ರತಿಯೊಂದು ಹಳ್ಳಿಯ ರೈತರಿಗೂ ಈ ಯೋಜನೆಯ ಬಗ್ಗೆ ಮಾಹಿತಿ ಒದಗಿಸಬೇಕು ಮತ್ತು ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚೆಚ್ಚು ಪ್ರಚಾರ ಮಾಡಿ ಜಿಲ್ಲೆಯ ರೈತರು ಇದರ ಅನುಕೂಲ ಪಡೆಯುವಂತೆ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೆಡುಕಿನ ನಿರ್ಮೂಲನೆಗೆ ಸಂಘಟಿತರಾಗಿ: ಡಾ. ಮೊಹಮ್ಮದ್ ಸಾದ್ ಬೆಳಗಾಮಿ
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ, ತಹಶೀಲ್ದಾರ್ ದತ್ತಾತ್ರೇಯ ಗಾದ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್, ಡಿವೈಎಸ್‌ಪಿ ಶೇಖರ್ ಸೇರಿದಂತೆ ಇತರರು ಇದ್ದರು.
