ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತುಮಕೂರು ಜಿಲ್ಲೆಯಾದ್ಯಂತ ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಸಹ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಿದರು.

ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೆಳಿಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.ಹೊಸ ಉಡುಪುಗಳನ್ನು ಧರಿಸಿ, ಒಬ್ಬರಿಗೊಬ್ಬರು ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ರಂಜಾನ್ ಹಬ್ಬದ ಸಂಭ್ರಮ ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಾರ್ಪಟ್ಟಿದ್ದು, ಮುಸ್ಲಿಂ ಬಾಂಧವರಿಗೆ ಹಿಂದೂ ಸಮುದಾಯದವರು ಸಹ ಹಬ್ಬದ ಶುಭಾಶಯ ಕೋರುವ ಮೂಲಕ ಭಾವೈಕ್ಯತೆಯನ್ನು ಸಾರಿದರು.

ಈದ್ಗಾ ಮೈದಾನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಅಸ್ಲಾಂಪಾಷ, ಅಪ್ತಾಫ್, ನಯಾಜ್ ಅಹಮದ್ ಮತ್ತಿತರರು ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.ಈದ್ಗಾ ಮೈದಾನಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುರುಳೀಧರ ಹಾಲಪ್ಪ ಅವರನ್ನು ಮುಸ್ಲಿಂ ಬಾಂಧವರು ಅಭಿನಂದಿಸಿದರು.
ಶುಭಕೋರಿದ ಗೃಹ ಸಚಿವರು
ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಒಂದು ತಿಂಗಳು ರೋಜಾ ಆಚರಣೆ ಮಾಡಿ ಅತ್ಯಂತ ಪವಿತ್ರವಾಗಿ ಆಚರಿಸುವ ಹಬ್ಬ ರಂಜಾನ್. ಎಲ್ಲಾ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರುತ್ತೇನೆ ಎಂದರು.

ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಪವಿತ್ರವಾದ ರಂಜಾನ್ ಹಬ್ಬದ ಶುಭಾಶಯ ಕೋರಿದ ಅವರು ಅವರ ಜೀವನದಲ್ಲಿ ಎಲ್ಲ ಕಷ್ಟಗಳು ದೂರವಾಗಲಿ. 6ನೇ ಶತಮಾನದಲ್ಲಿ ಮಹಮದ್ ಪೈಂಗಬರರು ಇಡೀ ವಿಶ್ವಕ್ಕೆ ಎಲ್ಲರೂ ಸಹೋದರತ್ವದಿಂದ ಬಾಳಬೇಕು ಎಂಬ ಶಾಂತಿಯ ಸಂದೇಶವನ್ನು ಸಾರಿದರು. ಈ ಸಂದೇಶವನ್ನು ಎಲ್ಲ ಮುಸಲ್ಮಾನ್ ಬಾಂಧವರು ಪಾಲಿಸುತ್ತಾರೆ ಎಂಬುದು ನನ್ನ ನಂಬಿಕೆ ಎಂದರು.
ಹಿಂದೂ ಮತ್ತು ಮುಸ್ಲಿಂ ನಾವೆಲ್ಲರೂ ಸಹೋದರತ್ವ ಭಾವನೆಯಿಂದ ಒಟ್ಟಾಗಿ ಬಾಳೋಣ ಎಂದು ಕರೆ ನೀಡಿದರು.ನಿನ್ನೆ ಯುಗಾದಿ ಹಬ್ಬ ಸಹ ಆಚರಣೆಯಾಗಿದೆ. ಯುಗಾದಿ ಮತ್ತು ರಂಜಾನ್ ಎರಡೂ ಹಬ್ಬಗಳು ಒಟ್ಟೊಟ್ಟಿಗೆ ಬಂದಿದ್ದು, ಇಬ್ಬರು ಸಹೋದರತ್ವದಿಂದ ಬಾಳಬೇಕು ಎಂದು ಆ ದೇವರೇ ಒಟ್ಟಿಗೆ ಹಬ್ಬವನ್ನು ಕೊಟ್ಟಿದ್ದಾನೆ. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳೋಣ ಎಂದರು.
ಹಬ್ಬದ ಪ್ರಯುಕ್ತ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮಾರ್ಗ ಬದಲಾವಣೆ
ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರಿಂದ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಅಡಿಷನಲ್ ಎಸ್ಪಿ ಅಬ್ದುಲ್ ಖಾದರ್, ಡಿವೈಎಸ್ಪಿ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.