ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ವೇದಿಕೆ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದು 48 ಗಂಟೆಗಳ ಬಳಿಕ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಯಸಂದ್ರ ರವಿಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್ 511, 506, 504, 143, 149, 323, 363 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ, ತಿಪಟೂರು ತಾಲೂಕುಗಳ ಗಣಿಬಾಧಿತ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ರಾಯಸಂದ್ರ ರವಿಕುಮಾರ್ ಅವರಿಗೆ ಟೆಂಡರ್ ಆಗಿತ್ತು. ಕೊನೆಯ ಕ್ಷಣದಲ್ಲಿ ದಾಖಲೆ ಸಹಿತ ಟೆಂಡರ್ ಕರಾರು ಮಾಡಿಕೊಳ್ಳಲು ಹೋದಾಗ ನಿಮ್ಮ ಟೆಂಡರ್ ರದ್ದಾಗಿದೆ ಎಂದು ರಾಯಸಂದ್ರ ರವಿಕುಮಾರ್ ಅವರಿಗೆ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರು ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ವಿರುದ್ಧ ತಡರಾತ್ರಿಯಲ್ಲಿ ಪಿಡಬ್ಲ್ಯೂಡಿ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಧ್ಯರಾತ್ರಿ ಚೆಕ್ ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ; ಸ್ಥಳ ಪರಿಶೀಲನೆ
ಈ ವೇಳೆ ಗಲಾಟೆ ನಡೆದಿದ್ದರಿಂದ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ವೇದಿಕೆ ರಾಜ್ಯ ಸಂಚಾಲಕ ರಾಯಸಂದ್ರ ರವಿಕುಮಾರ್ ಮೇಲೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ರಾಯಸಂದ್ರ ರವಿಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.
