ತುಮಕೂರು ನಗರದ ಶಿರಾ ಗೇಟ್ ಬಳಿ ಬುಧವಾರ ತಡರಾತ್ರಿ ಸುಮಾರು 1.80 ಲಕ್ಷ ರೂ. ಮೌಲ್ಯದ 24 ಚೀಲ ಈರುಳ್ಳಿ ಕಳುವಾಗಿದೆ. ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರುಳ್ಳಿ ವ್ಯಾಪಾರಿ ಮಹ್ಮದ್ ನೂರಲ್ಲ ಅವರು ಅ.30ರಂದು ಈರುಳ್ಳಿಯನ್ನು ಖರೀದಿಸಿ ತಂದಿದ್ದರು. ಅದರಲ್ಲಿ 61 ಚೀಲದಷ್ಟು ಮಾರಾಟ ಮಾಡಿದ್ದು, ಉಳಿದ 49 ಚೀಲ ಈರುಳ್ಳಿಯನ್ನು ತಮ್ಮ ಗೋಡೌನ್‌ನಲ್ಲಿಟ್ಟಿದ್ದರು. ಆದರೆ, ಮಾರನೆಯ ದಿನ ಗೋಡೌನ್‌ಗೆ ಬಂದು ನೋಡಿದಾಗ 24 ಚೀಲದಷ್ಟು ಈರುಳ್ಳಿ ಕಳ್ಳತನ ಆಗಿರುವುದು ಗೋತ್ತಾಗಿದೆ.
ಮಹ್ಮದ್ ನೂರಲ್ಲ ಅವರು ತಳ್ಳುವ ಗಾಡಿಯಲ್ಲಿ ಈರುಳ್ಳಿಯನ್ನು ನಗರದ ನಾನಾಕಡೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶಿರಾ ಗೇಟ್‌ನ ಪುಟ್ಟಸ್ವಾಮಯ್ಯನಪಾಳ್ಯದ ಹತ್ತಿರ ಗೋಡೌನ್ ರೀತಿಯ ಶೆಡ್ ನಿರ್ಮಿಸಿ ಈರುಳ್ಳಿ ಸಂಗ್ರಹ ಮಾಡಿದ್ದರು. ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಅವರು ಸಂಗ್ರಹಿಸಿಟ್ಟಿದ್ದ ಈರುಳ್ಳಿ ಕಳುವಾಗಿದೆ.
ಈ ಹಿಂದೆ ಟೊಮೆಟೊ ದರ ಹೆಚ್ಚಳವಾದಾಗ ಟೊಮೊಟೊ ಕಳ್ಳತನ ಪ್ರಕರಣ ಹೆಚ್ಚಾಗಿದ್ದವು. ಈಗ ಈರುಳ್ಳಿ ಕಳ್ಳತನ ಆಗುತ್ತಿವೆ.