ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಪುಲೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ತುಮಕೂರು ನಗರದ ಸ್ಲಂ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಡೆದ ಸಾವಿತ್ರಿ ಬಾಪುಲೆರವರ 194ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಶಿಕ್ಷಣವಿದ್ದರೇ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಆಸ್ತಿ, ಭೂಮಿ, ಮನೆ ಅಥವಾ ಚಿನ್ನಕ್ಕಿಂತ ಶಿಕ್ಷಣವೇ ಮನುಷ್ಯನಿಗೆ ದೊಡ್ಡ ಆಸ್ತಿ, 1848ರಲ್ಲಿ ಪತಿ ಜ್ಯೋತಿಬಾಪುಲೆರವರ ಸಹಕಾರದೊಂದಿಗೆ ಸಾವಿತ್ರಿ ಬಾಯಿಪುಲೆ ಅವರು ತಳಸಮುದಾಯಗಳ ಹೆಣ್ಣುಗಳಿಗೆ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಕೂಲಿ ಕಾರ್ಮಿಕರಿಗೆ ರಾತ್ರಿಶಾಲೆ ಪ್ರಾರಂಭಿಸಿ ದಲಿತರಿಗಾಗಿ ಮನೆಯ ಭಾವಿಯಲ್ಲಿ ಕುಡಿಯುವ ನೀರನ್ನು ಬಿಟ್ಟುಕೊಟ್ಟರು ಎಂದು ಹೇಳಿದರು.

ಬ್ರಿಟೀಷ್ ಸರ್ಕಾರ ಇವರ ಸೇವೆಯನ್ನು ಶ್ಲಾಘಿಸಿ “ಇಂಡಿಯನ್ ಫಸ್ಟ್ ಲೇಡಿ ಟೀಚರ್” ಎಂಬ ಬಿರುದು ಕೊಟ್ಟಿದೆ. ಅವರ ಪರಿಶ್ರಮದಿಂದಲೇ ಹೆಣ್ಣು ಮಕ್ಕಳು ಭಾರತದಲ್ಲಿ ಉನ್ನತ ಸ್ಥಾನಗಳಿಗೆ ಹೇರಲು ಸಾಧ್ಯವಾಗಿದೆ. ಸ್ತ್ರೀ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥದಿಂದ ಶ್ರಮಿಸಿದ ಮಹಾತಾಯಿ ಸಾವಿತ್ರಿಬಾಯಿ, ಸಮಾಜ ನೀಡಿದ ಎಲ್ಲಾ ಅವಮಾನಗಳನ್ನು ಬದಿಗಿಟ್ಟು ಸಾಕ್ಷರತೆಯ ದೀಪ ಬೆಳಗಿದವರು ಸಾವಿತ್ರಿ ಬಾಯಿಪುಲೆ. ಇಂದು ದುಡಿಯುವ ಮಹಿಳೆಯರು ಸೇರಿ ಅವರನ್ನು ಸ್ಮರಿಸುತ್ತಿರುವುದು ಅರ್ಥಪೂರ್ಣವಾಗಿದೆ. 19ನೇ ಶತಮಾನದಲ್ಲಿ ಸತ್ಯಶೋಧಕ ಸಮಾಜದಿಂದ ಮಹಿಳಾ ವಿಮೋಚನೆಗಾಗಿ ಕನಸ್ಸು ಕಟ್ಟಿಕೊಟ್ಟ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿಯಾಗಿ ಸಾವಿತ್ರಿ ಬಾಯಿಪುಲೆಯವರು ಶ್ರಮಿಸಿರುವುದರಿಂದ ಮಹಿಳಾ ಹಕ್ಕುಗಳು ದೊರೆತಿದೆ. ಅವರ ಸುಧಾರಣೆಗಳು ಇಂದು ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಾಗಿ ಜಾರಿಯಾಗುತ್ತಿವೆ, ನಾವೆಲ್ಲರು ಅಸಮಾನತೆಯನ್ನು ತೊಡೆದುಹಾಕುವ ಪಣತೊಡಬೇಕಿದೆ ಎಂದರು.
ಆಧುನಿಕ ಸಮಾಜದಲ್ಲಿ ಸಾಕಷ್ಟು ಅವಕಾಶಗಳು ಮಹಿಳೆಯರಿಗಿವೆ, ಇವುಗಳನ್ನು ಪಡೆದುಕೊಳ್ಳಲು ಮುಂದಾದರೆ ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ಮೆಟ್ಟಿನಿಂತು ಆತ್ಮ ವಿಶ್ವಾಸದಿಂದ ಮುನ್ನುಗಿದ್ದರೆ ಗೆಲುವು ಖಚಿತವೆಂದ ಅವರು ತುಮಕೂರು ಸ್ಲಂ ಸಮಿತಿಯ ಶೈಕ್ಷಣಿಕ ಕೆಲಸಗಳು ಮತ್ತು ಸಮಾಜ ಸುಧಾರಣೆಯ ಕೆಲಸಗಳನ್ನು ಶ್ಲಾಘಿಸಿದರು.
ಅಕ್ಷರದ ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿಪುಲೆ
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜ ಮಾತನಾಡಿ ಸಾವಿತ್ರಿ ಬಾಯಿಪುಲೆ ರವರ ಬಾಲ್ಯ ಜೀವನವನ್ನು ಸ್ಮರಿಸುತ್ತ 1831 ರಲ್ಲಿ ಮಹಾರಾಷ್ಟçದ ಸತಾರ ಜಿಲ್ಲೆಯ ನೈಗಾಂವ್‌ನಲ್ಲಿ ಹುಟ್ಟಿದರು ಬಾಲ್ಯದಲ್ಲೇ ಜ್ಯೋತಿ ಬಾಪುಲೆರವರನ್ನು ಮದುವೆಯಾಗಿ ವಿದ್ಯಾಭ್ಯಾಸವನ್ನು ಕಲಿತರು ಎಂದರು.

150 ವರ್ಷಗಳ ಹಿಂದೆ ಶಾಲೆಯನ್ನು ತೊರೆದ ವಿದ್ಯಾರ್ಥಿಗಳಿಗೆ ಸ್ಟೇ ಫೆಂಡ್ ಕೊಡುವ ಯೋಜನೆ ಸತ್ಯಶೋಧಕ ಸಮಾಜದಿಂದ ಮಾಡಿದರು. 1860ರಲ್ಲಿ ವಿಧವೆಯವರ ತಲೆ ಬೋಳಿಸುವ ಪದ್ಧತಿಯನ್ನು ಪ್ರಭಲವಾಗಿ ವಿರೋಧಿಸಿದರು. ವಿಧವೆಯರಿಗೆ, ಧೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗುವ ಮಹಿಳೆಯರಿಗೆ ಪುನರ್‌ವಸತಿ ಕೇಂದ್ರಗಳನ್ನು ಹಾಗೂ ಶಿಶು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ನೆಲೆಕೊಟ್ಟರು, 19ನೇ ಶತಮಾನದಲ್ಲಿ ಮಹಿಳೆಯರಿಗೆ ಶಿಕ್ಷಣದ ಬಾಗಿಲು ತೆರೆಯದ ಸಂದರ್ಭದಲ್ಲಿ ಅಂದಿನ ಸಮಾಜದ ಕಟ್ಟುಪಾಡುಗಳ ಸುಧಾರಣೆಗಾಗಿ ಎಷ್ಟೇ ಅಪಮಾನಗಳಾದರು ತಡೆದುಕೊಂಡು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು ಎಂದು ವಿವವರಿಸಿದರು.
ಸಾವಿತ್ರಿ ಬಾಯಿಪುಲೆ ಅವರ ಈ ಸ್ಪೂರ್ತಿಯಿಂದ ಮಹಿಳೆಯರು ಇಂದು ಆಧುನಿಕ ಭಾರತದಲ್ಲಿ ಪ್ರಾಧಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದುರು. 35 ವಾರ್ಡ್ಗಳಲ್ಲಿರುವ ಸ್ಲಂಗಳ ಮೂಲಭೂತ ಸೌಕರ್ಯಗಳ ಕುರಿತು ಅಧ್ಯಯನ ಮಾಡಿ ನೀರು ಶೌಚಾಲಯ, ರಸ್ತೆ, ಚರಂಡಿ, ಇನ್ನಿತರೇ ಸೌಲಭ್ಯಗಳನ್ನು ದೊರಕಿಸಿಕೊಡಲು ನಗರಪಾಲಿಕೆಯಿಂದ ಪ್ರತ್ಯೇಕ ಯೋಜನೆಯನ್ನು ಸಿದ್ದಗೊಳಿಸಲಾಗುತ್ತಿದೆ, ಹಾಗೇ ಮುಂದಿನ ದಿನಗಳಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುತ್ತಿದ್ದು ಇದರಲ್ಲಿ ಸ್ಲಂ ನಿವಾಸಿಗಳು ಭಾಗಿಯಾಗಬೇಕು. ಇದರ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ತುಮಕೂರು ಸ್ಲಂ ಸಮಿತಿ ಕಲಾ ತಂಡದಿಂದ ಪರಿವರ್ತನಾ ಗೀತೆಗಳನ್ನು ಹಾಡಲಾಯಿತು.
ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಅನುಪಮಾ, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ , ತೃತೀಯ ಲಿಂಗಿಗಳ ಮುಖಂಡರಾದ ದೀಪಿಕಾ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ,ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ , ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಹದೇವಮ್ಮ, ಶಂಕ್ರಯ್ಯ, ಕಣ್ಣನ್, ಗಣೇಶ್, ಧನಂಜಯ್, ಮನೋಜ್, ಚಿಕ್ಕಗಂಗಮ್ಮ, ವೆಂಕಟೇಶ್, ಪುಟ್ಟರಾಜು, ನಂಜಮ್ಮ ಉಪಸ್ಥಿತರಿದ್ದರು.
.