ಗ್ರಾಮ ಸ್ವರಾಜ್ ಮಾದರಿಯಲ್ಲಿ ಬೀಜ ಸ್ವರಾಜ್, ಆಹಾರ ಸ್ವರಾಜ್ ರೂಪಿತವಾಗಬೇಕು. ಜನ ಸುಮಾದಾಯಗಳ ಸುರಕ್ಷತೆಯ ಕುರಿತು ಪ್ರತಿಯೊಬ್ಬರೂ ಮಾತನಾಡು ವಂತಾಗಬೇಕು. ಕೃಷಿ ರಾಜ್ಯ ಪಟ್ಟಿಯಲ್ಲಿ ಬರುವ ವಿಷಯಗಳಾಗಿದ್ದು, ದೆಹಲಿಯಲ್ಲಿ ಚರ್ಚೆ ಯಾಗದೆ ಸ್ಥಳೀಯವಾಗಿ ಚರ್ಚೆಗೆ ಒಳಪಡಬೇಕು ಎಂದು ಧಾನ್ಯದ ಗಾಂಧಿ ಎಂದೇ ಕರೆಯಲ್ಪಡುವ ಪರಿಸರ ಹೋರಾಟಗಾರ್ತಿ ಹಾಗೂ ಜಿಎಂ ಆ್ಯಕ್ಟಿವಿಸ್ಟ್ ವಂದನಾ ಶಿವ ಹೇಳಿದರು.
ಗಾಂಧೀ ಸಹಜ ಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್ ನ ದೊಡ್ಡ ಹೊಸೂರಿನ 4 ನೇ ದಿನದ ಸತ್ಯಾಗ್ರಹ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಗಳು ಯಾವ ನೀತಿಗಳನ್ನು ತರಬೇಕೆಂದು ಜನರು ಹೇಳುವಂತಾಗಬೇಕು. ಬೇರುಹಂತದಿಂದ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕು. ಇದೇ ನಿಜವಾದ ಸ್ವಾತಂತ್ರ‍್ಯ ಎಂದರು.
ಪ್ರಕೃತಿ ಕೇಂದ್ರಿತ ವಿಜ್ಞಾನ ಶಾಶ್ವತವೇ ಹೊರತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಶಾಶ್ವತವಲ್ಲ. ವಿನಾಶಕ ಅಭಿವೃದ್ಧಿಯ ಹೊರತಾಗಿ ವಿಕೇಂದ್ರೀಕರಣ, ಸ್ಥಳೀಯ ಹಾಗೂ ನಿಸರ್ಗಾಧಾರಿತ ಆರ್ಥಿಕ ವ್ಯವಸ್ಥೆ ಅಗತ್ಯವಿದೆ. ಪ್ರಕೃತಿಯು ತನ್ನದೇ ಆದ ಹಾದಿಯನ್ನು ಹೊಂದಿದೆ. ಸೃಷ್ಟಿ ಪ್ರಕ್ರಿಯೆಯ ವ್ಯವಸ್ಥೆಯನ್ನು ನಿಯಂತ್ರಣ ಮಾಡಲಾಗುತ್ತಿದೆ. ಈ ಪೂರ್ವ ನಿರ್ಧಾರಿತ ವಿಜ್ಞಾನ ಯಶಸ್ಸು ಕಾಣುವುದಿಲ್ಲ. ವಿಜ್ಞಾನ ಬಹಳ ಸಾರಶೀಲವಾದದ್ದು. ವಂಶವಾಹಿಗಳನ್ನು ಅಣುರೂಪಕ್ಕೆ ತೆಗೆದುಕೊಂಡು ಏನುಬೇಕಾದರೂ ಮಾಡುವ ತಂತ್ರಜ್ಞಾನ ಮಾರಕವಾಗಿದೆ ಎಂದು ತಿಳಿಸಿದರು.ಜೀವ ವಿರೋಧಿ ಸಂಶೋಧನೆಗಳಿಗೆ ನೀಡುವ ದೇಣಿ ಮತ್ತು ಪ್ರೋತ್ಸಾಹಗಳನ್ನು ನಿಲ್ಲಿಸಬೇಕು. ಕುಲಾಂತರಿ ತಳಿ ನಿರ್ಮಾಣದಿಂದ ಮಣ್ಣು ಮಾಲಿನ್ಯ ಆಗುತ್ತಿರುವುದಲ್ಲದೆ, ಅಪಾಯಕಾರಿ ರಾಸಾಯನಿಕಗಳ ಬಳಕೆಯೂ ಹೆಚ್ಚಾಗಿದೆ. ಮಣ್ಣನ್ನು ಶಾಶ್ವತವಾಗಿ ಕಲುಶಿತಗೊಳಸುವ ಕೆಲಸ ಮಾಡಲಾಗುತ್ತಿದ್ದು, ಇದನ್ನು ಉತ್ತೇಜಿಸುತ್ತಿರುವ ವಿಶ್ವ ವಾಣಿಜ್ಯ ಒಪ್ಪಂದವನ್ನು ಅಮೇರಿಕಾದಂತಹ ದೊಡ್ಡ ರಾಷ್ಟ್ರಗಳೇ ವಿರೋಧಿಸುತ್ತಿವೆ ಎಂದರು.
ಹಸಿರು ಕ್ರಾಂತಿಯ ಸಂದರ್ಭದಲ್ಲಿ ಯುದ್ಧಕ್ಕೆ ಬಳಸಲಾಗುವ ರಾಸಾಯನಿಕಗಳು ಗೊಬ್ಬರದ ರೂಪದಲ್ಲಿ ಸೇರಿಕೊಂಡವು. ಈಗ ಅವು ಮುಂದುವರೆಯುತ್ತಿವೆ. ಡಿಡಿಟಿಯಂತಹ ವಿನಾಶಕಾರಿ ಪುಡಿಯನ್ನು ಬಳಸಲಾಗುತ್ತಿತ್ತು. ಅದು ಕ್ಯಾನ್ಸರ್ ಕಾರಕ ಎನ್ನುವ ಕಾರಣಕ್ಕೆ ಅನೇಕ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಆದರೂ ನಮ್ಮ ರಾಷ್ಟ್ರಗಳಲ್ಲಿ ಈ ರೀತಿಯ ಯುದ್ಧ ರಾಸಾಯನಿಕಗಳನ್ನು ಬಳಸಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುಳ್ಳು ಹೇಳುವುದಕ್ಕೆಂದೇ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 2ನೇ ಮಹಾಯುದ್ಧದ ನಂತರ 09 ದೇಶಗಳಲ್ಲಿ ಯುದ್ಧಗಳು ನಡೆಯುತ್ತಿವೆ. ಹೀಗೆ ಕೃಷಿಗೆ ಬಳಸುವ ವಸ್ತುಗಳು ಮತ್ತು ಯುದ್ಧಗಳಿಗೆ ಒಂದಕ್ಕೊಃದು ಸಂಬಂಧವಿದೆ. ಹಿಂಸಾಚಾರದ ಜೊತೆಗೆ ರಾಸಾಯನಿಕ ಬಳಕೆಯೂ ಹೆಚ್ಚಾಗಿದೆ ಮತ್ತು ಅಸತ್ಯ, ಹಿಂಸಾಚಾರಗಳಿಗೆ ಬಲಿಯಾಗಿದ್ದೇವೆ. ಆದ್ದರಿಂದ. ‘ಡಿ’ಗ್ಲೋಬಲೈಸೇಶನ್ ಆಗುವ ಅನಿವಾರ್ಯ ಎದುರಾಗಿದೆ ಎಂದರು.ಅಪಾಯಕಾರಿ, ವಿಷಕಾರಿ, ವಿನಾಶಕಾರಿ ತಂತ್ರಜ್ಞಾನವನ್ನು ವಿರೋಧಿಸುವ ಮೂಲಕ ಈ ಭೂಮಿಯ ಭವಿಷ್ಯವನ್ನು ಹಾಗೂ ಜನರನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ನಟ, ನಿರ್ದೇಶಕ ಹಾಗೂ ಪರಿಸರವಾದಿ, ಪಶ್ಚಿಮ ಘಟ್ಟ ಉಳಿಸಿ ಕ್ಯಾಂಪೇನರ್ ಸುರೇಶ್ ಹೆಬ್ಳೀಕರ್ ಮಾತನಾಡಿ, ಭೂಮಿಯ ಮೇಲಿನ ಜೀವ ವಸ್ಯವಸ್ಥೆ ತನ್ನದೇ ಆದ ವಿಕಾಸವನ್ನು ಹೊಂದಿದೆ. ಮನುಷ್ಯ ಅದರಲ್ಲಿ ಹಸ್ತಕ್ಷೇಪ ಮಾಡಬಾರದು. ಕುಲಾಂತರಿ ತಳಿಗಳ ಅನುಷ್ಠಾನದಿಂದ ಆಹಾರ ವೈವಿಧ್ಯತೆಯನ್ನು ಕಳೆದುಕೊಳ್ಳುವುದಲ್ಲದೆ, ಸ್ವಾದದ ವೈವಿಧ್ಯತೆಯೂ ಕ್ಷೀಣವಾಗುತ್ತದೆ. ಅಪಾರ ಜನಸಂಖ್ಯೆಯನ್ನು ತೋರಿಸಿ ಆಹಾರ ಉತ್ಪಾದನೆಯ ಕಾರಣಕ್ಕೆ ಅಪಾಯಕಾರಿ ದಾರಿಯನ್ನು ಹಿಡಿದಿದ್ದೇವೆ. ಪ್ರಗತಿ ಎನ್ನುವುದು ಅರ್ಥವನ್ನು ಕಳೆದುಕೊಂಡಿದ್ದು, ಅದಕ್ಕೆ ಹೊಸ ವ್ಯಾಖ್ಯಾನ ಬೇಕಿದೆ ಎಂದರಲ್ಲದೆ, ‘ಭೂಮಿಯು ಮಾನವನ ಅವಶ್ಯಕತೆಯನ್ನು ಪೂರೈಸುತ್ತದೆಯೇ ಹೊರತು ದುರಾಸೆಗಳನ್ನಲ್ಲ’ ಎಂದು ಮಾಹಾತ್ಮ ಗಾಂಧಿ ಮಾತನ್ನು ಸ್ಮರಿಸಿಕೊಂಡರು.

ಜಿಎಂ ಆ್ಯಕ್ಟಿವಿಸ್ಟ್ ಹಾಗೂ ಸಿನಿಮಾ ನಟ ಕಿಶೋರ್ ಮಾತನಾಡಿ, ಆಹಾರ ಧಾನ್ಯಗಳ ಸ್ವಾವಲಂಬನೆ ನಾಶಮಾಡಿ ರೈತರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಬಹುರಾಷ್ಟ್ರೀಯ ಕಂಪನಿಗಳು ಕೆಲಸಮಾಡುತ್ತಿವೆ. ಕೊನೆಗೆ ರೈತರು ಭೂಮಿಯನ್ನು ಮಾರಿಕೊಂಡು ಹೋಗುವಂತೆ ಮಾಡಿ ಪ್ರಜಾಪ್ರಭುತ್ವ ನಾಶಮಾಡುತ್ತಾರೆ. ಇದನ್ನು ವಿರೋಧಿಸಿ ನಮ್ಮ ಸಾಂಪ್ರದಾಯಿಕ ಕೃಷಿಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ನಾನು ಸತ್ಯಾಗ್ರಹದ ಜೊತೆಗಿರುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಫೇಲೊ ಬ್ಯಾಕ್ ಸಂಸ್ಥೆಯ ವಿಶಾಲ ಕಿಶೋರ್, ಎನ್ವಿರಾನ್ಮೆಂಟ್ ಸಪೋರ್ಟ್ ಬಾರ್ಗವಿ, ಪರಿಸರವಾದಿ ಸಿ.ಯತಿರಾಜು, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಗಾಂಧಿ ಸಹಜ ಬೇಸಾಯ ಆಶ್ರಮದ ರವೀಶ್ ಹಾಗೂ ಆಶ್ರಮ ವಿದ್ಯಾರ್ಥಿಗಳು, ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತ ಮುಖಂಡರು, ಹೋರಾಟಗಾರರು ಇದ್ದರು.
ಸತ್ಯಾಗ್ರಹದ ನಿರ್ಣಯಗಳು:
1. ದೊಡ್ಡಹೊಸೂರು ಸತ್ಯಾಗ್ರಹವನ್ನು ಎಲ್ಲಾ ಜಿಲ್ಲೆಗಳಗೆ ವಿಕೇಂದ್ರಿಕರಿಸುವುದು ಕುಲಾಂತರಿ ಬೆಳೆ ನೀತಿ, ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪದೆ ತಿರಸ್ಕರಿಸುವುದು. 2. ಭಾರತದ ಸಂವಿಧಾನದ ಅರ್ಟಿಕಲ್ 21 ರಲ್ಲಿ ಹೇಳುವಂತೆ, ಸತ್ಯಾಗ್ರಹವು ಹವಾಮಾನ ವೈಪರೀತ್ಯಕ್ಕೆ ಒಗ್ಗುವ ನಮ್ಮ ಪಾರಂಪರಿಕ ಕೃಷಿ ಪದ್ಧತಿಗೆ ಒತ್ತು ನೀಡಬೇಕು ಮತ್ತು ಸಹಜ – ಸುಸ್ಥರ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಾಗಿ ಕೇಂದ್ರಿಕರಿಸಬೇಕು. 3. ಸತ್ಯಾಗ್ರಹಿಗಳು ಬಹುರಾಷ್ಟ್ರೀಯ ಕಂಪನಿಗಳು ಹೇಳುತ್ತಿರುವ ಕೃಷಿ ಪದ್ಧತಿಯ ಹುನ್ನಾರಗಳನ್ನು ಎಲ್ಲಾ ಸಮುದಾಯ ಗುಂಪುಗಳು, ಧರ್ಮ ಗುರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕ ಸಮಾಜದ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವರಿಗೆ ಅರ್ಥಮಾಡಿಸಬೇಕು. 4. ಎಲ್ಲಾ ಸಮುದಾಯಗಳು ಮತ್ತು ಸಮಾಜದೊಂದಿಗೆ ಸಮಾಲೋಚಿಸಿದ ನಂತರ, ಜಿಲ್ಲಾ ಮಟ್ಟದ ಸತ್ಯಾಗ್ರಹಿಗಳು ಹೆಚ್ಚುವರಿ ಬೇಡಿಕೆಗಳನ್ನು ಸೇರಿಸಬಹುದು.
