ತುಮಕೂರು ನಗರದ ಬಿ ಎಚ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಬೆಂಕಿ ಕಾಣಿಸಿಕೊಂಡ ಪರಿಣಾಮ ಮೂವರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.
ಹಾಸ್ಟೆಲ್ ನೆಲಮಹಡಿಯಲ್ಲಿದ್ದ ವಿದ್ಯುತ್ ಜಂಕ್ಷನ್ ಬಾಕ್ಸ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿದ್ದು, ಕ್ಷಣಾರ್ಧದಲ್ಲೇ ಜಂಕ್ಷನ್ ಬಾಕ್ಸ್‌ಗೆ ಸಂಪರ್ಕವಿದ್ದ ಎಲೆಕ್ಟ್ರಿಕ್ ವೈರಿಂಗ್‌ಗಳಿಗೂ ಬೆಂಕಿ ಪ್ರವಹಿಸಿ ವೈರ್‌ಗಳು ಸುಟ್ಟು ಹೊಗೆಯಾಡಲಾರಂಭಿಸಿದೆ. ವಿದ್ಯಾರ್ಥಿನಿಯರು ಏನಾಯಿತೆಂದು ನೋಡುವಷ್ಟರಲ್ಲೇ ಮೊದಲೆರೆಡು ಅಂತಸ್ಥಿನ ಕೊಠಡಿಗಳಿಗೆ ಹೊಗೆ ಆವರಿಸಿದ್ದು, ಕೊಠಡಿಯೊಳಗಿದ್ದ ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದಾರೆ. ಕೆಲವರು ಕಿರುಚುತ್ತಾ ಹಾಸ್ಟೆಲ್‌ನಿಂದ ಹೊರಬರಲು ಪ್ರಾರಂಭಿಸಿದ್ದು, ಅನೇಕ ವಿದ್ಯಾರ್ಥಿನಿಯರು ಹಿಂಬಾಲಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ತಾತ್ಕಾಲಿಕವಾಗಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಕುಸುಮಾ, ಮತ್ತಿಬ್ಬರು ವಿದ್ಯಾರ್ಥಿನಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
“ಜೀವಂತ ಉಳಿಯುತ್ತೇವೆಂಬ ನಂಬಿಕೆ ಇರಲಿಲ್ಲ. ತಕ್ಷಣಕ್ಕೆ ಎಲ್ಲರೂ ಹಾಸ್ಟೆಲ್ ಕಟ್ಟಡ ಬಿಟ್ಟು ಹೊರ ಬಂದೆವು. ಈ ಹಿಂದೆ ಹಲವು ಬಾರಿ ಇದೇ ರೀತಿ ಸಮಸ್ಯೆಯಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
“ಏನಾದರೂ ಸಮಸ್ಯೆಯಾದಗ ಮಾತ್ರ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಸ್ಟೆಲ್‌ಗೆ ಬರುತ್ತಾರೆ. ಅದರೆ ನಮ್ಮ ಸಮಸ್ಯೆ ಹೇಳಿಕೊಳ್ಳಲು ಹೋದರೆ ಯಾರೂ ಗಮನ ಹರಿಸುವುದಿಲ್ಲ” ಎಂದು ವಿದ್ಯಾರ್ಥಿನಿಯರು ಅಳಲನ್ನು ತೋಡಿಕೊಂಡರು.
“ಊಟ ತಿಂಡಿ ಸಮಸ್ಯೆಯಾದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು, ಪ್ರಾಣವೇ ಹೋದರೆ ಏನು ಮಾಡುವುದು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲೇ ಇರುವ ಹಾಸ್ಟೆಲ್ ಬಗ್ಗೆ ಇಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ತಾತ್ಸಾರ, ನಿರ್ಲಕ್ಷ್ಯ ಭಾವನೆಯಿಂದ ಸಮಸ್ಯೆ ಎದುರಾಗಿದೆ” ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ಹಾಸ್ಟೆಲ್ ಹೊರಗಡೆ ಬಂದು ಜಮಾಯಿಸಿದ ವಿದ್ಯಾರ್ಥಿನಿಯರು ಆತಂಕಗೊಂಡಿದ್ದರು. ಒಳಗಡೆ ತಮ್ಮ ಇತರೆ ಸ್ನೇಹಿತೆಯರಿಗೆ ಏನಾಗಿದೆಯೋ ಏನೋ? ಎಂದು ಚಿಂತಿತರಾಗುವ ಜತೆಗೆ ಹಾಸ್ಟೆಲ್ ಸಮಸ್ಯೆಗಳನ್ನು ಕೇಳುವವರಿಲ್ಲ. ಈಗಾಗಲೇ ಮೇಲಾಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಗಾಬರಿಯಿಂದ ತಮ್ಮ ತಂದೆ ತಾಯಿ ಸಹೋದರರಿಗೆ ಫೋನಾಯಿಸಿ ಮನೆಗೆ ಬರುತ್ತೇವೆಂದು ಹೇಳುತ್ತಿದ್ದ ದೃಶ್ಯ ಕಂಡುಬಂದಿತು.
“ಹಾಸ್ಟೆಲ್‌ನಲ್ಲಿ ಅಳವಡಿಸಿರುವ ವೈರಿಂಗ್‌ಗಳು ಹಳೆಯದಾಗಿರುವ ಜತೆಗೆ ಕಾಲಕಾಲಕ್ಕೆ ದುರಸ್ತಿಗೆ ಕ್ರಮ ವಹಿಸದಿರುವುದರಿಂದ ಈ ಅವಘಡ ಸಂಭವಿಸಿದೆ. ಪ್ರಾಣಾಪಾಯದ ಅವಘಡವಾಗಿದ್ದರೆ ದೊಡ್ಡ ದುರಂತವೇ ಆಗುತ್ತಿತ್ತು. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಕಾಲಕಾಲಕ್ಕೆ ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳನ್ನು ಪತ್ತೆಮಾಡಿ ಪರಿಹರಿಸುವ ಕಾರ್ಯ ಮಾಡಬೇಕಿದೆ” ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರಿನಲ್ಲಿ ಭರ್ಜರಿ ಮಳೆ; ಪಾಲಿಕೆ ನಿರ್ಲಕ್ಷ್ಯದಿಂದ ಸಂಚಾರಕ್ಕೆ ತೊಂದರೆ
“ಸರ್ಕ್ಯೂಟ್ ಬೋರ್ಡ್ ಸುಟ್ಟು ಹೋಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಮಕ್ಕಳು ಭಯದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅಧಾಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭರವಸೆ ನೀಡಿದ್ದಾರೆ.
