ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ. ಶಾಸಕರು ಅವರ ಬೆಂಬಲಕ್ಕೆ ಇದ್ದಾರೆ. ಹಾಗಾಗಿ ಹೈಕಮಾಂಡ್ ಕೂಡ ಬದಲಾವಣೆ ಮಾಡುವ ಉದ್ದೇಶ ಹೊಂದಿಲ್ಲ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ತುಮಕೂರು ನಗರದ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯನವರೇ ವ್ಯಕ್ತಪಡಿಸಿದಂತೆ ನಾನೂ ಕೂಡ ಅದೇ ಆಶಯವನ್ನು ಹೊಂದಿದ್ದೇನೆ. ಸಿಎಂ ಬದಲಾವಣೆ ಆಗಬೇಕೆಂದರೆ ಹೈಕಮಾಂಡ್ ಬದಲು ಮಾಡಬೇಕೇ ಹೊರತು, ಎಂಎಲ್‌ಎಗಳು ಮಾಡಲಿಕ್ಕೆ ತಯಾರಿಲ್ಲ. ಹೈಕಮಾಂಡ್ ಕೂಡ ಸಿಎಂ ಬದಲಾವಣೆ ಮಾಡಲು ತಯಾರಿಲ್ಲ ಅಂತಾ ಅಂದುಕೊಂಡಿದ್ದೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ದೆಹಲಿಗೆ ಕೇಂದ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಂತ್ರಿಗಳನ್ನು ಭೇಟಿ ಮಾಡುವ ಅಗತ್ಯ ಇರುತ್ತದೆ. ಹಾಗಾಗಿ ಅವರನ್ನ ಭೇಟಿ ಮಾಡವುದಕ್ಕೆ ಹೋಗಿದ್ದಾರೆ. ಭೇಟಿ ಸಂದರ್ಭದಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡುವುದು ವಾಡಿಕೆ.
ಅದರಲ್ಲಿ ನಮ್ಮ ಪಕ್ಷದ ಕೆಲವು ತೀರ್ಮಾನಗಳು. ಬೋರ್ಡ್, ಕಾರ್ಪೋರೇಷನ್ ಎಂಎಲ್‌ಸಿಗಳು ಅಂತಿಮ ವಿಚಾರವಾಗಿ ಮಾತನಾಡುವುದು ಇರುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಿ ಗೊಂದಲ ಸೃಷ್ಟಿ ಮಾಡಬಾರದು” ಎಂದರು.
“ಎಐಸಿಸಿ ಅಧ್ಯಕ್ಷರು ಸಹಿ ಮಾಡಿ ಒಂದು ಪತ್ರಕಳಿಸಿದರೆ, ಅದನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಬದಲಾವಣೆ ಮಾಡುತ್ತೇವೆ ಎನ್ನುವುದು ಅಶಿಸ್ತಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ: ಹುಲಿಗಳ ಸಾವಿನ ಬಳಿಕ ಚಿರತೆ ಶವ ಪತ್ತೆ
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು. ಹಾಗಾಗಿ ಅವರು ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡುವುದು ಇರುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ” ಎಂದು ಹೇಳಿದರು.
“ಸ್ವಾಮೀಜಿಗಳು ಒಬ್ಬೊಬ್ಬರು ಒಬ್ಬರ ಕಡೆ ಇರುತ್ತಾರೆ. ಇದು ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಹಾಗಾಗಿ ಹೇಳಿಕೆಗಳಲ್ಲಿ ತಪ್ಪು ಸರಿ ಹುಡುಕಬಾರದು” ಎಂದರು.