ರೈತರು ಹಾಗೂ ಕೃಷಿ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪಾವಗಡದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ -2 ತಹಸೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಅಕ್ರಮ-ಸಕ್ರಮ ಯೋಜನೆಯಲ್ಲಿ ಸುಮಾರು 30ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಜಮೀನು ಮಂಜೂರು ಮಾಡಿಸಿ ಖಾತೆ ಪಹಣಿ ಮಾಡಿಕೊಡಬೇಕು. ರೈತರಿಗೆ ಸರಿಯಾಗಿ ವಿದ್ಯುತ್ ಸರಬರಾಜು ನೀಡದೇ ಇರುವುದರಿಂದ ಬೆಳೆ ಒಣಗುತ್ತಿವೆ. ಟ್ರಾನ್ಸ್ ಫಾರಂ (ಟಿಸಿ) ಅಳವಡಿಸಲು ಗುತ್ತಿಗೆದಾರರು ಸುಲಿಗೆ ಮಾಡುತ್ತಿದ್ದು, ಒಂದು ವಿದ್ಯುತ್ ಪರಿವರ್ತಕ ನೀಡಲು 3ಲಕ್ಷ ಕೇಳುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.
ಭಾರತೀಯ ಸೇನೆಯಲ್ಲಿ ಮೈಲಾರಪ್ಪ ಎಂಬುವರು ಸುಮಾರು 20ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ. ಇವರು ಕಸಬಾ ಹೋಬಳಿ ಕೊಡಮಡಗು ಗ್ರಾಮದ ಸರ್ವೆ ನಂಬರ್ 126ರಲ್ಲಿ 4.34ಎಕರೆ ಜಮೀನಿಗೆ ಅರ್ಜಿ ಸಲ್ಲಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಮಂಜೂರು ಮಾಡದೆ ನಿರ್ಲಕ್ಷ ವಹಿಸಿದ್ದಾರೆ. ಇನ್ನಾದರೂ ಸರ್ಕಾರವು ದೇಶ ಕಾದ ಯೋಧನಿಗೆ ಎಲ್ಲಾ ರೀತಿಯ ಸೌಲತ್ತುಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷವೂ ಬೆಳೆ ವಿಮೆಯನ್ನು ರೈತರು ಕಟ್ಟುತ್ತಾ ಬಂದಿದ್ದರು ಸಹ, ಬೆಳೆವಿಮೆ ನೀಡದೆ ವಿಮೆ ಕಂಪನಿಯು ರೈತರಿಗೆ ವಂಚಿಸುತ್ತಿದೆ ಹಾಗೂ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸಕಾಲಕ್ಕೆ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ, ತಾಲೂಕು ಉಪಾಧ್ಯಕ್ಷ ನಾರಾಯಣಪ್ಪ, ಕಾರ್ಯದರ್ಶಿ ನರಸಣ್ಣ, ಶಿವು, ಮಂಜುನಾಥ್, ಹನುಮಂತರಾಯಪ್ಪ, ಚಿತ್ತಯ್ಯ , ಸುಶೀಲಮ್ಮ ಇನ್ನಿತರರು ಇದ್ದರು.