ಗ್ರಾಮ ಹಾಗೂ ಕೃಷಿ ತೊರೆದು ನಗರದತ್ತ ಹೋಗುವ ಬದಲು ನಮ್ಮ ಒಕ್ಕಲುತನ ಉಳಿಸಿ ಬೆಳೆಸಿ ಧರ್ಮಾಚರಣೆ ಜೊತೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮೊದಲು ಜಮೀನು ಮಾರುವ ಪ್ರವೃತ್ತಿ ಬಿಡಬೇಕು ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಗುಬ್ಬಿ ತಾಲೂಕಿನ ಕಸಬ ಹೋಬಳಿ ಎಸ್ ಕೊಡಗೀಹಳ್ಳಿ ಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಜಮೀನು ಮಾರಿ ನಗರ ಸೇರಿದ ಬಳಿಕ ಕೆಲ ಹಳ್ಳಿಗಳು ವೃದ್ಧಾಶ್ರಮದಂತೆ ಕಾಣುತ್ತಿವೆ. ಕೃಷಿ ನಡೆಸಲು ಹಿಂದೇಟು ಹಾಕುವ ಯುವ ಸಮುದಾಯ ಆಧುನಿಕತೆಗೆ ಜೋತು ಬಿದ್ದಿವೆ” ಎಂದರು.
“ಗ್ರಾಮಗಳಿಂದ ಆರಂಭವಾದ ಕೃಷಿ ದೇಶದ ಆರ್ಥಿಕ ಸುಸ್ಥಿತಿಗೆ ಕಾರಣವಾಗಿದೆ ಎಂಬುದು ಯುವ ಸಮುದಾಯ ಮನಗಾಣಬೇಕಿದೆ. ಕೃಷಿಯೇ ಅತ್ಯುತ್ತಮ ಉದ್ಯೋಗ ಎನಿಸುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಜಮೀನು ಮಾರುವ ಚಿಂತನೆ ಬಿಟ್ಟು ಗ್ರಾಮೀಣ ಭಾಗದಲ್ಲಿ ಯುವಕರು ಉದ್ಯೋಗ ಸೃಷ್ಠಿ ಮಾಡಬೇಕು” ಎಂದು ಕರೆ ನೀಡಿದರು.
“ಕೃಷಿ ಶಿಕ್ಷಣ ಅವಶ್ಯವಾಗಿ ಬೇಕಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೂಡಾ ಬಂದೇ ಬರುತ್ತದೆ. ಈ ನಿಟ್ಟಿನಲ್ಲಿ ಒಕ್ಕಲಿಗರು ಒಕ್ಕಲುತನ ಸಂಪ್ರದಾಯಬದ್ಧವಾಗಿ ಮುನ್ನಡೆಸುವುದೂ ಕೂಡಾ ಒಂದು ಧರ್ಮದ ಕೆಲಸ” ಎಂದರು.
“ಪ್ರತಿಯೊಂದು ಜೀವಿಯಲ್ಲಿ ಕಾಣುವ ನಾಲ್ಕು ಅವಶ್ಯವಾದ ಆಹಾರ, ನಿದ್ರೆ, ಭಯ ಹಾಗೂ ಮೈಥುನ ನಿಯಮಿತವಾಗಿ ಪ್ರಕ್ರಿಯೆ ನಡೆಯುತ್ತದೆ. ಹಾಗೆಯೇ ಬದುಕು ಕಟ್ಟಿಕೊಳ್ಳಲು ಅವಶ್ಯ ಉದ್ಯೋಗ ಆಯ್ಕೆ ಮಾಡಬೇಕಿದೆ. ಮೊದಲು ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಇಂದಿಗೂ ಶೇ.70ರಷ್ಟು ಕೃಷಿಕ ವರ್ಗವಿದೆ. ಮನುಷ್ಯ ಜನ್ಮ ಮುಕ್ತಿಗಾಗಿ ಎಂಬ ನಂಬಿಕೆ ನಮ್ಮಲ್ಲಿದೆ. ಆ ಕಾರಣ ಮನುಷ್ಯತ್ವದ ಜೀವನ ಸಾಗಿಸಲು ಧಾರ್ಮಿಕಾಚರಣೆ ನಡೆಸಿ ನೆಮ್ಮದಿ ಕಾಣಬೇಕು” ಎಂದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, “ಸಂಬಂಧಕ್ಕೆ ಬೆಲೆ ಇಲ್ಲವಾದ ಈ ಕಾಲದಲ್ಲಿ ಅರ್ಧ ದಿನದ ಮದುವೆ ನಡೆಯುತ್ತಿದೆ. ಆದರೂ ಆಡಂಬರ ಮಾತ್ರ ಎಂದಿಗೂ ಬಿಟ್ಟಿಲ್ಲ. ಪ್ರತಿಷ್ಠೆ ಪ್ರದರ್ಶನ ಮಾಡುವ ಮದುವೆಗಳು ಎಂದಿಗೂ ಸರಳ ವಿವಾಹ ಆಗಲಾರದು. ಕಲ್ಯಾಣ ಮಂಟಪ ಗ್ರಾಮದಲ್ಲಿ ಉಪಯೋಗವಾಗಲಿ ಎಂಬ ಹಾರೈಕೆ ನಮ್ಮದು. ಆಧುನಿಕತೆ ಹಿಂದೆ ಓಡುವ ನಮ್ಮ ಇಂದಿನ ಸಮಾಜ ಕೇವಲ ತೋರಿಕೆಗೆ ಸೀಮಿತವಾಗುತ್ತದೆ. ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮಗಳಲ್ಲಿ ನಿರಂತರ ನಡೆಯಲಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ; ಪ್ರಣಾಳಿಕೆ ಬಿಡುಗಡೆ
ವೇದಿಕೆಯಲ್ಲಿ ಮಂಗಳನಾಥ ಸ್ವಾಮೀಜಿ, ಮಾಜಿ ಶಾಸಕ ಎಚ್ ನಿಂಗಪ್ಪ, ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಯೋಜನಾಧಿಕಾರಿ ರಾಜೇಶ್, ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ ಸಮಿತಿಯ ಎ ಗೋವಿಂದರಾಜು, ಕೆ ಎನ್ ವೆಂಕಟೇಗೌಡ, ಮುಖಂಡರಾದ ಗಿರೀಶ್, ಬಸವರಾಜು, ಪ್ರತಾಪ್, ವೆಂಕಟೇಶ್ ಸೇರಿದಂತೆ ಇತರರು ಇದ್ದರು.
