ತುಮಕೂರು ಬಳಿಯ ಕೊಂಡಾಪುರ ಗೋಮಾಳದ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕಿ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಅಡುಗೆ ಸಹಾಯಕಿ ಲಲಿತಮ್ಮ ಅವರು ಮಕ್ಕಳಿಂದಲೇ ತಮ್ಮ ಮನೆಯ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಆರೋಪಿ ಲಲಿತಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.