ಸಮಾಜದಲ್ಲಿ ಸಮಾನತೆ ಹಕ್ಕು ಪ್ರತಿಪಾದಿಸಿದ ಸಂವಿಧಾನ, ದೇಶದ ಪ್ರತೀ ಪ್ರಜೆಗೂ ಪವಿತ್ರ ಗ್ರಂಥವಿದ್ದಂತೆ ಎಂದು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಹೇಳಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು. ಸಂವಿಧಾನಕ್ಕೆ ಗೌರವ ಸಮರ್ಪಣೆ ಮಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಜಾಥಾ ಗ್ರಾಮೀಣ ಭಾಗದಲ್ಲಿ ಸಹ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು.
ಸರ್ವ ಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯ ರಚಿಸಿದ ನಮ್ಮ ಸಂವಿಧಾನ, ವಿಶ್ವ ಶ್ರೇಷ್ಠ ಎನಿಸಿದೆ. ಇಂತಹ ಪವಿತ್ರ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದು ಸಹ ಪ್ರತೀ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಇಂತಹ ಸಂವಿಧಾನ ತಿದ್ದುಪಡಿ ಮಾಡುವ ಹುನ್ನಾರ ಕೆಲ ಮೂರ್ಖರು ಮಾಡಲು ಯತ್ನಿಸಿದ್ದಾರೆ. ಕಾನೂನಿನಲ್ಲಿ ಎಲ್ಲರೂ ಸಮಾನರು ಎಂಬ ತತ್ವ ಇರುವುದು ಸಹಿಸದ ಕೆಲವರು ತಿದ್ದುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಲಿದ್ದಾರೆ. ಇಂತಹ ಘಟನೆಗೆ ಆಸ್ಪದ ನೀಡದೆ ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಸಮಾಜ ಕಟ್ಟೋಣ. ಸಂವಿಧಾನ ತೋರಿದ ಮಾರ್ಗದರ್ಶನ ಎಂದೆಂದಿಗೂ ಉತ್ತಮ ಹಾಗೂ ಆರೋಗ್ಯಕರ ಸಮಾಜಕ್ಕೆ ಕಾರಣ ಎಂದರು.
ಕುಣಿಗಲ್ ತಾಲೂಕಿನಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ಗುಬ್ಬಿ ತಾಲೂಕು ಗಡಿ ಭಾಗದಲ್ಲಿ ಸ್ವಾಗತಿಸಿದ ಗುಬ್ಬಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಅದ್ದೂರಿಯಾಗಿ ಮೆರವಣಿಗೆಮಾಡಲಾಯಿತು. ಶಾಲಾ ಮಕ್ಕಳು ದೇಶದ ಪ್ರಮುಖ ನಾಯಕರು, ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟಿದ್ದರು. ವಿವಿಧ ಕಲಾ ತಂಡದೊಂದಿಗೆ ನಡೆದ ಮೆರವಣಿಗೆಯಲ್ಲಿ ದಲಿತ ಪರ ಸಂಘಟನೆಗಳು, ಸಾಮಾಜಿಕ ಸಂಘಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಭಾಗವಹಿಸಿದ್ದವು.
ಮೆರವಣಿಗೆಯಲ್ಲಿ ತಹಸೀಲ್ದಾರ್ ಬಿ.ಆರತಿ, ತಾಪಂ ಇಒ ಪರಮೇಶ್ ಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಒ ಲೇಪಾಕ್ಷಪ್ಪ, ಪಪಂ ಸದಸ್ಯರಾದ ಮಹಮದ್ ಸಾದಿಕ್, ಕುಮಾರ್, ಶಶಿಕುಮಾರ್, ಶೋಕತ್ ಆಲಿ, ದಲಿತ ಮುಖಂಡರಾದ ಜಿ.ಎಚ್. ಜಗನ್ನಾಥ್, ನಿಟ್ಟೂರು ರಂಗಸ್ವಾಮಿ, ಜಿ.ವಿ.ಮಂಜುನಾಥ, ಈರಣ್ಣ ಇತರರು ಇದ್ದರು.