ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಗ್ರಾಮದ ಬಳಿ ಆರಂಭವಾಗಿರುವ ಸೋಲಾರ್ ಪಾರ್ಕ್ ಎರಡನೇ ಹಂತದ ವಿಸ್ತರಣೆ ಕಾರ್ಯ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಅಮರನಾಥ್ ತಿಳಿಸಿದರು.
ಸುದ್ದಿಗಾರರೊಂದಿ ಮಾತನಡಿದ ಅವರು, “ಎರಡನೇ ಹಂತದ ವಿಸ್ತರಣೆ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಇಲ್ಲಿ 300 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. 2019ರಲ್ಲಿ ಕಾರ್ಯಾರಂಭ ಮಾಡಿದ ಮೊದಲ ಹಂತದ ಯೋಜನೆಯಲ್ಲಿ ಈಗಾಗಲೇ 2,050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಎರಡೂ ಸೇರಿದರೆ ಒಟ್ಟು 2,350 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗಲಿದೆ” ಎಂದು ತಿಳಿಸಿದರು.
“ಈ ಯೋಜನೆಗೆ ಒಟ್ಟು 13 ಸಾವಿರ ಎಕರೆ ಜಮೀನನ್ನು ರೈತರಿಂದ ಬಾಡಿಗೆ ಪಡೆಯಲಾಗಿತ್ತು. ಅದರಲ್ಲಿ ಖಾಲಿ ಉಳಿದಿದ್ದ 1,200 ಎಕರೆಯಲ್ಲಿ ಎರಡನೇ ಹಂತದ ಯೋಜನೆ ತಲೆ ಎತ್ತಲಿದೆ. ಖಾಸಗಿ ಕಂಪನಿಗಳಿಂದ ಟೆಂಡರ್ ಕರೆಯುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ” ಎಂದು ಹೇಳಿದರು.
“ಮೂರನೇ ಹಂತದಲ್ಲಿ ರಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,500 ಮೆ.ವ್ಯಾ ಮತ್ತು ನಾಲ್ಕನೇ ಹಂತದಲ್ಲಿ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಮೆ ವ್ಯಾ ವಿದ್ಯುತ್ ಉತ್ಪಾದನೆಗೆ ಪಾರ್ಕ್ ವಿಸ್ತರಣೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರೂಪುರೇಷೆ ಸಿದ್ಧವಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಹಂತ, ಹಂತವಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗುವುದು” ಎಂದರು.
“ಒಟ್ಟಾರೆಯಾಗಿ ನಾಲ್ಕು ಹಂತದ ವಿಸ್ತರಣೆ ಮತ್ತು ಅಭಿವೃದ್ಧಿ ಯೋಜನೆ ಪೂರ್ಣಗೊಂಡರೆ ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಒಟ್ಟು 5,350 ಮೆ ವ್ಯಾ ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. ಅಲ್ಲಿಗೆ ಪಾವಗಡ ಸೋಲಾರ ಪಾರ್ಕ್ ಜಗತ್ತಿನ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಹಿರಿಮೆಗೆ ಪಾತ್ರವಾಗಲಿದೆ” ಎಂದು ಹೇಳಿದರು.
“ಉತ್ತರ ಕರ್ನಾಟಕದ ಬೀದರ್ ಕಲಬುರಗಿ ಹಾವೇರಿ ಗದಗ ಸೇರಿದಂತೆ ಇತರ ಭಾಗಗಳಲ್ಲಿ ಸೋಲಾರ್ ಪಾರ್ಕ್ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಕಟ್ಟಡಗಳ ಮೇಲೆ ಸೋಲಾರ್ ಫಲಕ ಅಳವಡಿಸುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಬೆಂಗಳೂರಿನ ಹಲವೆಡೆ ಸೌರಫಲಕ (ಸೋಲಾರ್ ಪ್ಯಾನೆಲ್) ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕೇಂದ್ರ ಬರ ಅಧ್ಯಯನ ತಂಡದಿಂದ ಬೆಳೆ ಪರಿಶೀಲನೆ
“ತುಮಕೂರು, ಬೆಂಗಳೂರು, ಮೈಸೂರು, ಹಿರಿಯೂರು, ಗುತ್ತಿ, ಬಳ್ಳಾರಿ ಸೇರಿದಂತೆ ಹಲವು ಕಡೆ ಪಾವಗಡ ಗ್ರಿಡ್‌ನಿಂದ ಸೌರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇಲ್ಲಿಂದಲೇ ವಿದ್ಯುತ್ ಪೂರೈಸಲಾಗುತ್ತಿದೆ. ಸದ್ಯ ಪಾವಗಡದಲ್ಲಿ ಉತ್ಪಾದನೆಯಾಗುತ್ತಿರುವ 2050 ಮೆ ವ್ಯಾ ಪೈಕಿ 1850 ಮೆ ವ್ಯಾ ಸೌರ ವಿದ್ಯುತ್ ಅನ್ನು ರಾಜ್ಯದ ಬೇರೆ ವಿದ್ಯುತ್ ವಿತರಣಾ ಕಂಪನಿಗಳು ಖರೀದಿಸುತ್ತಿವೆ. ಉಳಿದ 200 ಮೆ.ವ್ಯಾ ವಿದ್ಯುತ್ ಅನ್ನು ಉತ್ತರಪ್ರದೇಶ ಖರೀದಿಸುತ್ತಿದೆ” ಎಂದು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ಎಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.