ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ‍್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಸಚಿವ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಮಹಾನಗರ ಪಾಲಿಕೆ ವತಿಯಿಂದ ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನಿರ್ಮಿಸಿರುವ ಗ್ಯಾರಮೂರ್ತಿ ಕಲಾಕೃತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಹಲವಾರು ದೇಶಗಳು ಗಾಂಧೀಜಿಯವರ ಆದರ್ಶಗಳನ್ನು ಒಪ್ಪಿ, ಅಳವಡಿಸಿಕೊಂಡಿವೆ. ಇದಕ್ಕೆ ಸಾಕ್ಷಿಯಾಗಿ ಬಹುತೇಕ ಪ್ರಪಂಚದ ಎಲ್ಲ ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಆಫ್ರಿಕಾ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ಗಾಂಧೀಜಿಯವರ ಆದರ್ಶಗಳೇ ಪ್ರೇರಣೆಯಾಗಿದ್ದವು. ಗಾಂಧಿ ಭಾರತದ ಶಕ್ತಿಯಾಗಿದ್ದರು. ಗಾಂಧೀಜಿಯವರನ್ನು ಪಡೆದ ನಾವೆಲ್ಲ ಅದೃಷ್ಟವಂತರು ಎಂದರು.
ಅಮಾನಿಕೆರೆಯ ಗ್ಯಾರಮೂರ್ತಿ(ಹನ್ನೊಂದು ಮೂರ್ತಿ) ಎಂಬುದು ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ಚಳುವಳಿಯಾದ ‘ದಂಡಿಯಾತ್ರೆ’ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ. ಗ್ಯಾರಮೂರ್ತಿ ಕಲಾಕೃತಿ ನಿರ್ಮಿಸಿದ ಮಧುಗಿರಿಯ ದೇವರಾಜು ಅವರನ್ನು ಅಭಿನಂದಿಸಿದ ಸಚಿವರು ಈ ದಿನ ಗಾಂಧೀ ಜಯಂತಿಯೊಂದಿಗೆ ಮತ್ತೊಬ್ಬ ದೇಶದ ಮಹಾನ್ ನಾಯಕ ಲಾಲ್‌ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದರು

ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಚರಿತ್ರೆಯನ್ನು ನಾವೆಂದೂ ಮರೆಯದೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರಲ್ಲದೆ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ದೊರೆತಿದೆ. ದೇಶದ ಸ್ವಾತಂತ್ರ್ಯ, ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಹೋರಾಡಿ ತ್ಯಾಗ-ಬಲಿದಾನ ಮಾಡಿದವರನ್ನು ನಾವಿಂದು ಸ್ಮರಿಸಬೇಕೆಂದು ತಿಳಿಸಿದರು.
ಸಂಸದ ವಿ. ಸೋಮಣ್ಣ ಹಾಗೂ ನಾನು ಇಬ್ಬರೂ ಸೇರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧವಿಲ್ಲದೆ ಒಟ್ಟಾಗಿ ಶ್ರಮಿಸುತ್ತೇವೆ. ನಗರದ 2 ಕಡೆ ಬೃಹತ್ ಸ್ವಾಗತ ಕಮಾನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ನಗರದ ಅಮಾನಿ ಕೆರೆ ಗ್ಯಾರಮೂರ್ತಿ ಕಲಾಕೃತಿ ನಿರ್ಮಾಣವು ತುಮಕೂರು ಬದಲಾಗುತ್ತಿರುವುದರ ಸಂಕೇತವಾಗಿದೆ. ತುಮಕೂರು ಜಿಲ್ಲೆ ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದೆ. ಜಿಲ್ಲೆಗೆ ಸಬ್ ಅರ್ಬನ್ ರೈಲು, ಮೆಟ್ರೋ ರೈಲು ಬರಲಿದೆ. ವಸಂತನರಸಾಪುರದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿರುವುದರಿಂದ ಮೆಟ್ರೋ ರೈಲನ್ನು ವಸಂತನರಸಾಪುರದವರೆಗೂ ಕೊಂಡೊಯ್ಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರಲ್ಲದೆ ಅಮಾನಿಕೆರೆಗೆ ಕಲುಷಿತ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ಕಲುಷಿತ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲು ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ ಸ್ವಚ್ಛ ಭಾರತ ಗಾಂಧಿಯವರ ಕನಸಾಗಿತ್ತು. ಗಾಂಧಿ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವು ಯಶಸ್ವಿ ಕಂಡಿದೆ. ವಿಶ್ವದ ಭೂಪಟದಲ್ಲಿ ದೇಶದ ಹೆಸರನ್ನು ಗುರುತಿಸುವಂತೆ ಮಾಡಿರುವ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತಿçಯರಂತಹ ಸಾಧಕರ ಮಾರ್ಗದಲ್ಲಿ ನಮ್ಮ ಮಕ್ಕಳು ನಡೆಯುವಂತಾಗಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಗ್ಯಾರಾ ಮೂರ್ತಿಗಳ ಬಗ್ಗೆ ಮಾಹಿತಿ ನೀಡುತ್ತಾ ಅಮಾನಿಕೆರೆಯ ಗ್ಯಾರಾ ಮೂರ್ತಿ(ಹನ್ನೊಂದು ಮೂರ್ತಿ) ಎಂಬುದು ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ಚಳುವಳಿಯಾದ ‘ದಂಡಿಯಾತ್ರೆ’ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ. ಮಹಾತ್ಮಗಾಂಧೀಜಿ ಅವರು ಮುನ್ನಡೆಯುತ್ತ ಅವರನ್ನು ಸಮಾಜದ ವಿವಿಧ ವರ್ಗ ಸಮುದಾಯ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ ಹತ್ತು ಮಂದಿ ಹಿಂಬಾಲಿಸುತ್ತಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ. ಭಾರತದ ಸ್ವಾತಂತ್ರ‍್ಯದ 25ನೇ ವರ್ಷದ ನೆನಪಿನಲ್ಲಿ ಮೊದಲ ಬಾರಿಗೆ 1972 ರಲ್ಲಿ ಈ ಕಲಾಕೃತಿಯನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು. ಶ್ರೀ ದೇವಿಪ್ರಸಾದ್ ಚೌಧುರಿ ಅವರು ಈ ಕಲಾಕೃತಿಯ ಸೃಷ್ಟಿ ಕರ್ತರು ಎಂದು ತಿಳಿಸಿದರು.

ಗ್ಯಾರಾಮೂರ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಮಹಾತ್ಮ ಗಾಂಧಿರವರನ್ನು ಹಿಂದೂ, ಸಿಖ್ ಹಾಗೂ ಮುಸಲ್ಮಾನ ಸಮುದಾಯದ ತಲಾ ಒಬ್ಬರು, ಒಬ್ಬ ಕ್ರಿಶ್ಚಿಯನ್ ಪಾದ್ರಿ, ಒಬ್ಬ ರೈತ/ಶ್ರಮಿಕ ವರ್ಗದ ಮಹಿಳೆ, ಒಬ್ಬ ವ್ಯಾಪಾರಿ, ಒಬ್ಬ ದೈಹಿಕವಾಗಿ ದುರ್ಬಲನಾದ ವ್ಯಕ್ತಿ ಮತ್ತು ಒಬ್ಬ ವೃದ್ಧನನ್ನು ಚಳುವಳಿಯ ಗುಂಪಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಒಬ್ಬ ಮಹಿಳೆ ಹಾಗೂ ಯುವಕ ಹೀಗೆ ವಿವಿಧ ವರ್ಗಗಳ ಹತ್ತು ಮಂದಿ ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಹೀಗೆ ಜಾತಿ, ಧರ್ಮ, ಭಾಷೆ, ಆರ್ಥಿಕ ಸ್ಥಿತಿ ಹಾಗೂ ಇತರೆ ಎಲ್ಲ ವ್ಯತ್ಯಾಸಗಳಿದ್ದರೂ ಮಹಾತ್ಮ ಗಾಂಧಿರವರ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ.
ತುಮಕೂರು ಅಮಾನಿಕೆರೆ ಉದ್ಯಾನವನದಲ್ಲಿ ಈ ಗ್ಯಾರಾಮೂರ್ತಿಯ ಕಲಾಕೃತಿಯ ಪ್ರತಿರೂಪವನ್ನು ಸ್ಥಾಪಿಸಲಾಗಿದ್ದು ಆಕೃತಿಯು ಒಟ್ಟು 50 ಅಡಿ ಉದ್ದ ಹಾಗೂ ಸರಾಸರಿ 10 ಅಡಿ ಎತ್ತರವಿದೆ ಎಂದು ತಿಳಿಸಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಮಾಜಿ ಸೈನಿಕರಾದ ಸುಬೇದಾರ್ ಬಿ. ಲಿಂಗಣ್ಣ, ಸಾರ್ಜೆಂಟ್ ಸಿ. ಪಾಂಡುರಂಗ, ಹವಾಲ್ದಾರರುಗಳಾದ ಪ್ರಸನ್ನಕುಮಾರ್, ನವೀನ್, ಗಂಗಯ್ಯ, ವಿ.ಡಿ. ನಾಗರಾಜು, ಪುಟ್ಟ ಬಾಲಯ್ಯ, ರಾಜಣ್ಣ, ಡಿ.ಎಲ್ ರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಇದ್ದರು.
