ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಮಠಾಧೀಶರಿಗೆ ಹೆದರಿಸಿ, ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಆರು ಮಂದಿ ವಿರುದ್ಧ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಚರ್ಮ ವ್ಯಾದಿ ವಾಸಿಯಾಗದ ಬಗ್ಗೆ ಸ್ವಾಮೀಜಿಯು ಯುವತಿಯ ಬಳಿ ದೂರವಾಣಿಯಲ್ಲಿ ಹೇಳಿಕೊಂಡಿದ್ದಾರೆ. ಯುವತಿ ಸಲಹೆ ಮೇರೆಗೆ ವೀಡಿಯೊ ಕರೆ ಮಾಡಿ ಚರ್ಮರೋಗ ಕಾಣಿಸಿಕೊಂಡ ಜಾಗ ತೋರಿಸಿದ್ದಾರೆ. ಇದೇ ವಿಡಿಯೊ ಇಟ್ಟುಕೊಂಡು ಈಗ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಾವು ಕೇಳಿದಷ್ಟು ಹಣ ಕೊಡದಿದ್ದರೆ ವಿಡಿಯೋವನ್ನು ಫೇಸ್ ಬುಕ್, ಯ್ಯೂಟೂಬ್‌ನಲ್ಲಿ ಹಂಚಿಕೊಳ್ಳಲಾಗುವುದೆಂದು ಬೆದರಿಕೆ ಹಾಕುತ್ತಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಎಚ್ ಎಸ್ ಅಭಿಷೇಕ್, ಬೆಂಗಳೂರಿನ 30 ವರ್ಷದ ಯುವತಿ, ಪಾಂಡುಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್, ಶ್ರೀನಿವಾಸ್, ರಾಮನಗರ ಜಿಲ್ಲೆಯ ಕನಕಪುರ ಗ್ರಾಮದ ಚೇತನ್, ಕುಣಿಗಲ್‌ನ ನಂದೀಶ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
“ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಾಲಯದ ಬಾಲ ಮಂಜುನಾಥ ಸ್ವಾಮೀಜಿಯ ಖಾಸಗಿ ವೀಡಿಯೊ ನಮ್ಮ ಬಳಿ ಇದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ” ಎಂದು ದೇವಸ್ಥಾನದ ಟ್ರಸ್ಟಿ ಕೆ ಅಭಿಲಾಷ್ ಎಂಬುವರು ದೂರು ನೀಡಿದ್ದರು.
“ಸ್ವಾಮೀಜಿಗೆ ಖಾಸಗಿ ಜಾಗದಲ್ಲಿ ಚರ್ಮ ಸಮಸ್ಯೆ ಶುರುವಾಗಿತ್ತು. ಇದನ್ನು ಸ್ವಾಮೀಜಿ ತನ್ನ ಅಪ್ತಸಹಾಯಕನಿಗೆ ತಿಳಿಸಿದ್ದರು. ತನ್ನ ಸಂಬಂಧಿ ಚರ್ಮರೋಗ ತಜ್ಞೆಯಾಗಿದ್ದು, ಆಕೆಗೆ ತೋರಿಸಿಸುವುದು ಒಳ್ಳೆಯದೆಂದು ಆತ ಸಲಹೆ ಮಾಡಿದ್ದ. ಇದಕ್ಕೆ ಸ್ವಾಮೀಜಿ ಒಪ್ಪಲಿಲ್ಲ. ನಂತರ ಚರ್ಮರೋಗ ಕಾಣಿಸಿಕೊಂಡ ಜಾಗದ ಚಿತ್ರ ತೆಗೆದು ಯುವತಿಗೆ ಕಳಿಸಲಾಗಿತ್ತು. ಅವರು ಒಂದಷ್ಟು ಔಷಧಿ ಮುಲಾಮು ತೆಗೆದುಕೊಳ್ಳುವಂತೆ ತಿಳಿಸಿದ್ದರು” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಾ.8ರಂದು ರಾಜ್ಯ ಮಟ್ಟದ ‘ಮಹಿಳಾ ಚೈತನ್ಯ ದಿನ’
“ಸ್ವಾಮೀಜಿಯ ಆಪ್ತ ಸಹಾಯಕರಾಗಿದ್ದ ಎಚ್ ಎಸ್ ಅಭಿಷೇಕ್ ಮೂಲಕ ಸ್ವಾಮೀಜಿಗೆ ಯುವತಿಯ ಪರಿಚಯವಾಗಿತ್ತು. ಆಕೆಯನ್ನು ತನ್ನ ಸಂಬಂಧಿ ಮತ್ತು ವೈದ್ಯೆ ಎಂದು ಅಭಿಷೇಕ್ ಪರಿಚಯಿಸಿದ್ದ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ